ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತಾಗಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ರಚಿಸಲಾಗುವುದು ಎಂದು ಸಂಸತ್ತಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಹೊಸದಿಲ್ಲಿ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಸಂಸತ್ ಸಭೆಯಲ್ಲಿ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಸಮಿತಿ ರಚನೆ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಲೋಕಸಭೆಯಲ್ಲಿ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಮಹತ್ವದ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಮಂದಿರ ನಿರ್ಮಿಸಲು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಎಂಬ ಹೆಸರಿನ ಸಮಿತಿಯನ್ನು ನಿರ್ಮಿಸಲಾಗುವುದು. ಟ್ರಸ್ಟ್ ರಚನೆ ಕುರಿತು ಕೇಂದ್ರ ಸಂಪುಟ ನಿರ್ಧಾರ ಕೈಗೊಂಡಿದೆ. ಟ್ರಸ್ಟ್‌ಗೆ ಭೂಮಿಯನ್ನು ಹಸ್ತಾಂತರಿಸಲಾಗುವುದು” ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸಭೆಯ ಎಲ್ಲ ಸದಸ್ಯರು ಸಹಕರಿಸಬೇಕು ಎಂದು ವಿನಂತಿಸಿದ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ ತೀರ್ಪಿನಂತೆ ಸುನ್ನಿ ವಕ್ಫ್ ಬೋರ್ಡ್‌ಗೆ 5 ಎಕರೆ ಭೂಮಿಯನ್ನು ನೀಡಲು ಉತ್ತರ ಪ್ರದೇಶ ಸರಕಾರ ಒಪ್ಪಿಕೊಂಡಿದೆ ಎಂಬ ಮಾಹಿತಿಯನ್ನು ತಿಳಿಸಿದರು.
ಭಾರತದಲ್ಲಿ ಹಿಂದು, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ ಅಥವಾ ಜೈನ್ ಹೀಗೆ ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂದು ಪಿಎಂ ಮೋದಿ ಲೋಕಸಭೆಯಲ್ಲಿ ಒತ್ತಿ ಹೇಳಿದರು.