ಸಮಾಜಮುಖಿ ವಿದ್ಯಾರ್ಥಿಗಳ ನಿರ್ಮಾಣಕ್ಕೆ “ನ್ಯಾಯಧಾರಾ” ಒಂದು ಕೊಡುಗೆ- ವಿವೇಕಾನಂದ ಕಾನೂನು ಕಾಲೇಜಿನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟನೆಯಲ್ಲಿ ಗೌರವಾನ್ವಿತ ಡಾ.ಎನ್.ಕುಮಾರ್-ಕಹಳೆ ನ್ಯೂಸ್
ಒಂದು ಒಳ್ಳೆಯ ಸಮಾಜ ಒಂದು ಉತ್ತಮ ದೇಶ ನಿರ್ಮಾಣದಲ್ಲಿ ವಕೀಲರ, ನ್ಯಾಯಾಧೀಶರ ಪಾತ್ರ ಅತೀ ಮುಖ್ಯ. ಈ ನಿಟ್ಟಿನಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉತ್ತಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಗತಿ ನೀಡುವ ಉದ್ದೇಶದಿಂದ ನ್ಯಾಯಧಾರಾ ಎಂಬ ಕಾರ್ಯಕ್ರಮ ರೂಪಿಸಿದ್ದು ಆ ತರಗತಿಗಳ ಉದ್ಘಾಟಣೆ ಮತ್ತು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನಾ ಕಾರ್ಯಕ್ರಮವು ಜರಗಿತು.
ಈ ಕಾರ್ಯಕ್ರಮದಲ್ಲಿ ಕಾಲೀಜಿನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ.ವಿಜಯನಾರಾಯಣ.ಕೆ.ಎಂ ಇವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, 31 ನೇ ವರ್ಷದ ಹಾದಿಯಲ್ಲಿ ಸಾಗುತ್ತಿರುವ ಕಾನೂನು ಕಾಲೇಜು ಕೈಗೊಂಡಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮವೇ ನ್ಯಾಯಧಾರ. ವಿದ್ಯಾರ್ಥಿಗಳ ಉತ್ತಮ ಬದುಕು ರೂಪಿಸುವಲ್ಲಿ ಹಾಗೂ ಒಳ್ಳೆಯ ಸಮಾಜ ಕಟ್ಟುವಲ್ಲಿ, ಉತ್ತಮ ಸೇವೆಯನ್ನು ಕೊಡುವ ಸಾಮಥ್ರ್ಯ ಹೊಂದಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಭಾವೀ, ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಲು ಈ ವ್ಯವಸ್ಥೆಯನ್ನು ಕೈಗೊಂಡಿರುವುದಾಗಿ ತಿಳಿಸಿದರು. ಮುಂದಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ ನ್ಯಾಯಾಧೀಶರಾದ ಗೌರವಾನ್ವಿತ ಡಾ.ಎನ್.ಕುಮಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಈ ತರಬೇತಿಯನ್ನು ಪಡೆದ ವಿದ್ಯಾರ್ಥಿಯು ಸಮಾಜಮುಖಿ ನ್ಯಾಯಾಂಗ ವ್ಯವಸ್ಥೆಯ ಉತ್ತಮ ಅಧಿಕಾರಿಯಾಗಿ ಹೊರಹೊಮ್ಮಬೇಕಾದರೆ ರಾಷ್ಟ್ರದ ಹಿರಿಮೆ ಹಾಗೂ ಸಂಸ್ಕøತಿಯನ್ನು ಮೈಗೂಡಿಕೊಂಡಿರಬೇಕು ಹಾಗೂ ಈ ಮೂಲಕ ಒಬ್ಬ ಉತ್ತಮ ಪ್ರಜೆಯಾಗಿರುವುದು ಅತೀ ಅಗತ್ಯ. ಅದರ ಜೊತೆಗೆ ಪ್ರಾಮಾಣಿಕರಾಗಿ ತಮ್ಮ ಬುದ್ಧಿ ಸಾಮಥ್ರ್ಯದಿಂದ ಸಮಾಜಕ್ಕೆ ಒಳಿತಾಗುವ ಕೊಡುಗೆ ನೀಡುವುದು ಅತೀ ಅಗತ್ಯ ಎಂದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಕರ್ನಾಟಕದ ಉಚ್ಛನ್ಯಾಯಾಲಯದ ವಕೀಲರೂ, ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಶ್ರೀ.ಎಸ್.ರಾಜಶೇಖರ್ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಹಿಂದಿನ ಕಾಲದ ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಅವಕಾಶಗಳನ್ನು ಇಂದಿನ ಕಾಲಕ್ಕೆ ಹೋಲಿಸಿದರೆ, ಇಂದಿನ ಕಾನೂನು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಕೊಳ್ಳಲು ನ್ಯಾಯಧಾರದಂತಹ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳು ಲಭ್ಯವಾಗುತ್ತಿದ್ದು. ಅದರ ಸದುಪಯೊಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆದುಕೊಳ್ಳಬೇಕು ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀ ಬಲರಾಂ ಆಚಾರ್ಯ ಇವರು ವಿವೇಕಾನಂದ ವಿದ್ಯಾವರ್ಧಕ ಸಂಘವು ಸಮಾಜದ ಏಳಿಗೆಗಾಗಿ ಹಲವಾರು ವಿದ್ಯಾಸಂಸ್ಥೆಗಳನ್ನು ಹುಟ್ಟು ಹಾಕಿದೆ. ವಿವೇಕಾನಂದ ಕಾನೂನು ಮಹಾ ವಿದ್ಯಾಲಯವು ಇದರಲ್ಲೊಂದು ಪ್ರತಿಷ್ಠಿತ ವಿದ್ಯಾಸಂಸ್ಥೆ ಅಲ್ಲದೆ ಇಲ್ಲಿನ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗುವ ಪ್ರತಿಯೊಂದು ವ್ಯವಸ್ಥೆಯೂ ಭಾರತೀಯ ಸಂಸ್ಕøತಿಯನ್ನು ಹಾಗೂ ಸಂಸ್ಕಾರವನ್ನು ಬಿಂಬಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಧಾರೆಯೆರೆಯಲಾಗುತ್ತದೆ ಆದುದರಿಂದ ಈ ಸಂಸ್ಥೆಯು ಉಳಿದ ಎಲ್ಲಾ ಸಂಸ್ಥೆಗಳಿಗಿಂತ ವಿಭಿನ್ನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿನಿಯಾದ ಕುಮಾರಿ ಪ್ರಜ್ಞಾ ಪ್ರಾರ್ಥಿಸಿ, ಕಾಲೇಜಿನ ಪ್ರಾಧ್ಯಾಪಕಿಯಾದ ಶ್ರೀಮತಿ ಅನ್ನಪೂರ್ಣ ವಿ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅಕ್ಷತಾ ಎ.ಪಿ. ಅತಿಥಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿನಿ ಕುಮಾರಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು, ಪ್ರಾಧ್ಯಾಪಕರಾದ ಶ್ರೀ ಕೌಶಿಕ್ ವಂದಿಸಿದರು.