Recent Posts

Sunday, November 17, 2024
ಸುದ್ದಿ

ಫಿಲೋಮಿನಾದಲ್ಲಿ ಸಂಶೋಧನಾ ವಿಜ್ಞಾನಿಯೊಂದಿಗೆ ಸಂವಾದ-ಕಹಳೆ ನ್ಯೂಸ್

ಪುತ್ತೂರು: ಶಿಕ್ಷಣ ಸಂಸ್ಥೆಯು ಮಾನವನ ಭವಿಷ್ಯದ ಮಜಲುಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಪದವಿ ಗಳಿಕೆಯೊಂದಿಗೆ ವ್ಯಕ್ತಿತ್ವ ವಿಕಸನದೆಡೆಗೂ ಆದ್ಯತೆ ನೀಡಿದಾಗ ವೃತ್ತಿ ಬದುಕು ಉಜ್ವಲಗೊಳ್ಳುವುದು ಎಂದು ಗೋವಾ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ವಿದೇಶಿ ವಿವಿಗಳ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಡಿ.ಜೆ ಭಟ್ ಹೇಳಿದರು.


ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಸಸ್ಯಶಾಸ್ತ್ರ ಪ್ರಯೋಗಾಲಯದಲ್ಲಿ ‘ಸಂಶೋಧನಾ ವಿಜ್ಞಾನಿಯೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು. ಪ್ರಸ್ತುತ ಬದುಕನ್ನು ರೂಪಿಸಿಕೊಳ್ಳಲು ವಿಪುಲ ಅವಕಾಶಗಳಿವೆ. ವಿದ್ಯಾರ್ಥಿ ಬದುಕಿನಲ್ಲಿ ಆಸಕ್ತಿ, ಸಮಯದ ಸದ್ವಿನಿಯೋಗ ಮತ್ತು ಸತತ ಪರಿಶ್ರಮ ಬಹಳ ಮುಖ್ಯ. ಮಾನವೀಯ ಮೌಲ್ಯಗಳನ್ನು ಅಗತ್ಯವಾಗಿ ಬೆಳೆಸಿಕೊಳ್ಳಬೇಕು. ರಾಷ್ಟ್ರ ನಿರ್ಮಾಣದಂತಹ ಮಹತ್ವಾಕಾಂಕ್ಷೆಯಿಂದ ಮುಂದುವರಿಯುವ ಸ್ವಭಾವವನ್ನು ಅಳವಡಿಸಿಕೊಳ್ಳಬೇಕು ಎಂದರು. ಬಳಿಕ ಜರಗಿದ ಸಂವಾದದಲ್ಲಿ ವಿವಿಧ ರೀತಿಯ ಶಿಲೀಂದ್ರಗಳು ಮತ್ತು ಅದರ ಉಪಯೋಗಗಳು ಹಾಗೂ ಅವುಗಳಿಂದ ತಯಾರಿಸಬಹುದಾದ ರೋಗನಿರೋಧಕಗಳ ತಯಾರಿಕೆಯ ಕುರಿತು ವಿಷಯ ಮಂಡಿಸಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೆಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಹಿರಿಯಲ್ಲಿರುವ ಆದರ್ಶ ಗುಣಗಳನ್ನು ಶ್ಲಾಘಿಸುವ ಮನಃಸ್ಥಿತಿ ನಮ್ಮಲ್ಲಿರಬೇಕು. ಶಿಕ್ಷಣ ಸಂಸ್ಥೆಯ ಕುರಿತು ಪ್ರೀತಿ, ಅಭಿಮಾನವಿರಬೇಕು. ಈ ಸಂಸ್ಥೆಯು ಸಾಕಷ್ಟು ಮಂದಿ ಶಿಕ್ಷಣ ತಜ್ಞರನ್ನು ರೂಪಿಸುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದೆ. ಸಸ್ಯಶಾಸ್ತ್ರ ವಿಷಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಪರಿಸರದಲ್ಲಿರುವ ಗಿಡ, ಮರ, ಬಳ್ಳಿ ಮುಂತಾದವುಗಳಲ್ಲಿ ಅದಮ್ಯ ಪ್ರೀತಿಯಿರಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ನಿರಂತರ ಅಧ್ಯಯನ ಮತ್ತು ವಿದ್ವಾಂಸರೊಂದಿಗೆ ಸಂವಾದ ನಡೆಸಿದಾಗ ಜ್ಞಾನದ ಮಟ್ಟವು ವೃದ್ಧಿಸುತ್ತದೆ. ಉನ್ನತ ಸಾಧಕರ ಕೊಡುಗೆಗಳನ್ನು ಅರ್ಥೈಸಲು ಪ್ರಯತ್ನಿಸಬೇಕು. ಜೀವ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದವರಿಗೆ ಶ್ರೇಷ್ಠ ಮಟ್ಟದ ಅವಕಾಶಗಳು ಒದಗಿ ಬರುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಉತ್ಸುಕತೆಯಿಂದ ಮುಂದುವರಿಯುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ವಿಜ್ಞಾನ ವಿಷಯಗಳ ಡೀನ್ ಪ್ರೊ. ಉದಯ ಕೆ ಮತ್ತು ಐಕ್ಯೂಎಸಿ ಸಂಯೋಜಕ ಡಾ.ಎ.ಪಿ ರಾಧಾಕೃಷ್ಣ ಉಪಸ್ಥಿತರಿದ್ದರು.
ಅಕ್ಷಯ ಮತ್ತು ತಂಡದವರು ಪ್ರಾರ್ಥಿಸಿದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಪ್ರಸನ್ನ.ರೈ.ಕೆ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಶಶಿಪ್ರಭಾ ಬಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸ್ಮಿತಾ ವಿವೇಕ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು