ದೇಶದ ಲಕ್ಷ ಲಕ್ಷ ಮಸೀದಿ, ಚರ್ಚ್‌ಗಳಿಗೆ ಭೂಮಿ ಕೊಟ್ಟಿದ್ದು ಹಿಂದೂಗಳು ; ರಾಮನರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ – ಕಹಳೆ ನ್ಯೂಸ್
ರಾಮನಗರ: ಎಲ್ಲಾ ಸಮುದಾಯಗಳನ್ನು ಒಪ್ಪಿ, ಅಪ್ಪಿಕೊಳ್ಳುವ ಸಮಾಜವೆಂದರೆ ಅದು ಹಿಂದೂ ಸಮಾಜ. ದೇಶದ ಲಕ್ಷ ಲಕ್ಷ ಮಸೀದಿಗಳು, ಚರ್ಚ್‌ಗಳಿಗೆ ಭೂಮಿ ನೀಡಿದವರು ನಾವು. ಆದರೂ ಹಿಂದೂ ಸಮಾಜ ಜಾತ್ಯಾತೀತ ವಿರೋಧಿನಾ? ಅಂತ ಹಿರಿಯ ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನಿಸಿದರು.
ನಗರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಿಗೆ ನ್ಯಾಯ ಕೊಡಿಸುವ ಸಲುವಾಗಿ ಇವತ್ತು ಪೌರತ್ವ ಕಾಯಿದೆ ಬಂದಿದೆ. ಜನರಿಗೆ ಊಟ, ವಸತಿ ಕೊಟ್ಟು ನೆಮ್ಮದಿಯ ಜೀವನ ಕೊಡೋದು ತಪ್ಪಾ? ಎಂದು ಕೇಳಿದರು.
ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಲೀಗ್, ‘ನಮಗೂ ಹಿಂದುಗಳಿಗೂ ಸರಿ ಹೋಗಲ್ಲ. ನಮಗೆ ಬೇರೆಯದೇ ಭೂಮಿ ಕೊಡಿ ಹೋಗ್ತೀವಿ,’ ಅಂತ ಹೇಳಿದರು. ಆದರೆ ಹಿಂದುಗಳ ಪರವಾಗಿ ಯಾರು ಇದ್ರು? ಹಿಂದುಗಳು ಕಾಂಗ್ರೆಸ್ ನಮ್ಮ ಪರವಾಗಿ ನಿಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ಹಿಂದುಗಳ ಪರ ನಿಲ್ಲಲೇ ಇಲ್ಲ. ನಂತರ ಗೋಳ್ವಲ್ಕರ್ ಹಿಂದುಗಳ ಪರ ನಿಂತರು ಎಂದರು.
“ಇಲ್ಲೇ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಅಂತಾರೆ. ಆದರೆ ಪಾಕಿಸ್ತಾನಕ್ಕೆ ಜೈ ಅನ್ನೋರು ಪಾಕಿಸ್ತಾನಕ್ಕೆ ಹೋಗಲ್ಲ. ಅವರು ಸಹ ಇಲ್ಲೇ ಇರುತ್ತಾರೆ. ಯಾಕೆಂದರೆ ಮುಸಲ್ಮಾನರು ಅತ್ಯಂತ ಸಂತೋಷವಾಗಿ ಬದುಕುತ್ತಿರುವುದು ಭಾರತದಲ್ಲಿ ಮಾತ್ರ. ಸಿಎಎ ಮೂಲಕ ಪೌರತ್ವ ಕೊಡ್ತಾ ಇದ್ದಾರೆ, ಪೌರತ್ವ ಕಿತ್ತುಕೊಳ್ಳುತ್ತಿಲ್ಲ,” ಎಂದು ಅವರು ವಿವರಿಸಿದರು.
“ಇವತ್ತು ನಮಗೆ ತುಂಬಾ ಸಂತೋಷದ ದಿನ. ನಾವೀಗ ಕಾಶ್ಮೀರಕ್ಕೆ ಹೋಗಬಹುದು, ಬರಬಹುದು. ಸಾವಿರ ವರ್ಷಗಳ ಹಿಂದೆ ನಮ್ಮ ದೇಶದ ಮೇಲೆ ಮುಸ್ಲಿಮರು ದಾಳಿ ಮಾಡಿದರು. ಕ್ರಿಶ್ಚಿಯನ್ನರು ದಾಳಿ ಮಾಡಿದರು. ಬ್ರಿಟೀಷರು ನಮ್ಮನ್ನ ಗುಲಾಮರಾಗಿ ಮಾಡಿದರು. ಹಿಂದುಗಳಿಗಾಗಿ ಹೋರಾಟ ಮಾಡಿದ ಭೂಮಿ ಇದು,” ಎಂದು ಪ್ರಭಾಕರ ಭಟ್ ಹೇಳಿದರು.
ಸ್ವಾಮಿ ವಿವೇಕಾನಂದರ ಭಾಷಣವನ್ನು ಈಗಲೂ ಸಹ ಜಗತ್ತಿನಲ್ಲಿ 125 ವರ್ಷಗಳ ನಂತರವೂ ಹೇಳಲಾಗುತ್ತದೆ. ಜಗತ್ತಿನಲ್ಲಿ ಕ್ರಿಶ್ಚಿಯನ್ ಮತವನ್ನ ಶ್ರೇಷ್ಠ ಎಂದು ತೋರಿಸಲು ವಿಶ್ವ ಸರ್ವಧರ್ಮ ಸಮ್ಮೇಳನ ಮಾಡಲಾಗಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ ಎಂದು ಅವರು ತಿಳಿಸಿದರು.