Sunday, January 19, 2025
ಆರೋಗ್ಯಸುದ್ದಿ

ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂಗೆ ಸೇರಿಸಲು ಆಗ್ರಹ ; ಫೆ.12ರಂದು ದೇಶಾದ್ಯಂತ ಮೌನ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು: ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂ (ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ)ಕ್ಕೆ ಸೇರಿಸುವಂತೆ ಭಾರತೀಯ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಪದವೀಧರರ ಸಂಘ ಒತ್ತಾಯಿಸಿದೆ. ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿದ್ಯಾಸಂಸ್ಥೆಗಳನ್ನು ಸಿಸಿಐಎಂಗೆ ಸೇರಿಸುವಂತೆ ನೀತಿ ಆಯೋಗದ ಪ್ರಸ್ತಾವವಿದ್ದರೂ, ಒಂದೆಡೆ ಸಿಸಿಐಎಂ ಮೂಲಕ ಎನ್‌ಸಿಐಎಸ್‌ಎಂಗೆ ಸೇರ್ಪಡೆಗೊಳ್ಳದೇ, ಇನ್ನೊಂದೆಡೆ ಆಯುಷ್ ಸಚಿವಾಲಯದ ಪ್ರಸ್ತಾವನೆಯಂತೆ ಪ್ರತ್ಯೇಕ ಆಯೋಗ ರಚಿಸಬೇಕು ಎಂಬ ನಿಲುವಿಗೂ ಬಾರದೇ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾಸಂಸ್ಥೆಗಳು ದೇಶದೆಲ್ಲೆಡೆ ಅತಂತ್ರ ಸ್ಥಿತಿಯಲ್ಲಿವೆ ಎಂದು ಭಾರತೀಯ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಪದವೀಧರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ನವೀನ್ ಕೆ.ವಿ. ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಾನ್ಯ ಪ್ರಧಾನ ಮಂತ್ರಿಗಳ ಕಾರ್ಯಾಲಯ ತಕ್ಷಣ ಮಧ್ಯಪ್ರವೇಶಿಸಿ ದೇಶಾದ್ಯಂತ ಇರುವ ಯೋಗ ಮತ್ತು ನ್ಯಾಚುರೋಪತಿ ಶಿಕ್ಷಣ ಸಂಸ್ಥೆಗಳು, ಸಾವಿರಾರು ವೈದ್ಯರುಗಳ ಭವಿಷ್ಯ ಹಾಗೂ ವೈದ್ಯಕೀಯ ಪದ್ಧತಿಯನ್ನು ಉಳಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರಕಾರ ಯೋಗ ಸೇರಿದಂತೆ ನ್ಯಾಚುರೋಪತಿಗೆ ವಿಶೇಷ ಆದ್ಯತೆ ನೀಡುತ್ತಿದ್ದರೂ, ಶೈಕ್ಷಣಿಕ ವ್ಯವಸ್ಥೆಯಲ್ಲಾಗಿರುವ ನ್ಯೂನ್ಯತೆಯನ್ನು ಸರಿ ಮಾಡದೇ ಇರುವುದು ದುರದೃಷ್ಟಕರ ಬೆಳವಣಿಗೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ದೇಶದುದ್ದಗಲಕ್ಕೂ ಯೋಗ ಮತ್ತು ನ್ಯಾಚುರೋಪತಿ (ಪ್ರಕೃತಿ ಚಿಕಿತ್ಸೆ)ಯ 42ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಕಳೆದ 25ವರ್ಷಗಳಲ್ಲಿ 5 ಸಾವಿರ ವೈದ್ಯಕೀಯ ಪದವೀಧರರು ದೇಶ- ಹೊರದೇಶಗಳಲ್ಲಿ ದುಡಿಯುತ್ತಿದ್ದಾರೆ. ಪ್ರಸ್ತುತ 7 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಒಂದು ವೇಳೆ ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ ಸೇರಿಸದೇ ಹೋದಲ್ಲಿ, ಅಷ್ಟೂ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ. ಶಿಕ್ಷಣ ಸಂಸ್ಥೆಗಳಿಗೆ ಕುತ್ತು ಬರಲಿದೆ. ಆದ್ದರಿಂದ ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ (ನ್ಯಾಷನಲ್ ಕಮೀಷನ್ ಫಾರ್ ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್) ಸೇರಿಸುವಂತೆ ಆಗ್ರಹಿಸುತ್ತಿದ್ದೇವೆ. ಈಗಾಗಲೇ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಚಿಸಿದ ಸಂಸದೀಯ ಸ್ಥಾಯೀ ಸಮಿತಿಯು ಬಲವಾಗಿ, ಒಕ್ಕೊರಲಿನಿಂದ ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ ಸೇರಿಸಲು ಒಪ್ಪಿಕೊಂಡಿದ್ದು, ಯಾವುದೇ ಕಾನೂನಿನ ಅಡೆ-ತಡೆ ಇರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಯೋಗವನ್ನು ಮುಂದಿಟ್ಟುಕೊಂಡು ಭಾರತವು ವಿಶ್ವಗುರು ಆಗುತ್ತಿರುವ ಈ ಸಂದರ್ಭದಲ್ಲಿ, ಕೇಂದ್ರ ಸರಕಾರದ ವಿಶೇಷ ಆಸಕ್ತಿಯ ಹೊರತಾಗಿಯೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಸೂಕ್ತ ಶೈಕ್ಷಣಿಕ ಮಾನ್ಯತೆ ಹಾಗೂ ವೈದ್ಯರುಗಳ ರಾಷ್ಟ್ರೀಯ ವೈದ್ಯಕೀಯ ಪರವಾನಿಗೆ ನೀಡುವ ಸದಾವಕಾಶವನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎನ್ನುವುದು ನಮ್ಮೆಲ್ಲರ ಆತಂಕವಾಗಿದೆ.

ಹಿನ್ನೆಲೆ:
ದೇಶದಲ್ಲೇ ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಯೋಗ ಮತ್ತು ನ್ಯಾಚುರೋಪತಿಯನ್ನು ಮಂಗಳೂರು ವಿಶ್ವವಿದ್ಯಾಲಯ ಅಡಿಯಲ್ಲಿ ಉಜಿರೆಯಲ್ಲಿ ಪ್ರಾರಂಭಿಸಿದರು. ೧೯೮೯ರಲ್ಲಿ ಆರಂಭಗೊಂಡ ಈ ಸಂಸ್ಥೆಯಿಂದ ೧೯೯೪ರಲ್ಲಿ ಈ ಕ್ಷೇತ್ರದ ಮೊದಲ ವೈದ್ಯಕೀಯ ಪದವೀಧರರು ಹೊರಬಂದಿದ್ದು ಐತಿಹಾಸಿಕವಾಗಿತ್ತು. ಇದುವರೆಗೆ ೨೫ ಬ್ಯಾಚ್ ಯೋಗ ಹಾಗೂ ನ್ಯಾಚುರೋಪತಿಯ ಪದವೀಧರರು ದೇಶ-ವಿದೇಶಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಹೊಸ ಕ್ರಾಂತಿಗೆ ಕಾರಣರಾಗಿದ್ದಾರೆ.

೧೯೮೯ಕ್ಕೂ ಮೊದಲು ಯೋಗ ಮತ್ತು ನ್ಯಾಚುರೋಪತಿಯು ಯೋಗ ಫಿಟ್ನೆಸ್, ಎಜುಕೇಷನ್, ಸರ್ಟಿಫಿಕೇಟ್ ಕೋರ್ಸ್‌ಗಳಿಗಷ್ಟೇ ಸೀಮಿತವಾಗಿತ್ತು. ಹೈದರಾಬಾದ್‌ನಲ್ಲಿ ನ್ಯಾಚುರೋಪತಿ ಎಂಡಿ ಎಂಬ ೪ ವರ್ಷದ ಕೋರ್ಸ್ ನಡೆಯುತ್ತಿತ್ತು. ೧೯೮೯ರಲ್ಲಿ ಕರ್ನಾಟಕದಲ್ಲಿ ಬಿಎನ್‌ವೈಎಸ್ (ದ ಯುನಿವರ್ಸಿಟಿ ಗ್ರಾಜುವೇಟ್ ಡಿಗ್ರಿ ಬ್ಯಾಚುಲರ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್) ಆರಂಭಗೊಂಡಿತು. ಮುಂದೆ ಹೈದರಾಬಾದ್ ಕೋರ್ಸ್, ಬಿಎನ್‌ವೈಎಸ್ ಆಗಿ ರೂಪಾಂತರವಾಯಿತು. ೧೯೯೪ರ ಬಳಿಕ ಇದುವರೆಗೆ ಒಟ್ಟು ೯ ರಾಜ್ಯದಲ್ಲಿ ಬಿಎನ್‌ವೈಎಸ್ ಈ ಕೋರ್ಸ್‌ಗಳ ವೈದ್ಯರುಗಳಿಗೆ ಆಯಾ ರಾಜ್ಯದ ನೋಂದಣಿ ಬೋರ್ಡ್‌ಗಳ ಮೂಲಕ ವೈದ್ಯಕೀಯ ಪರವಾನಿಗೆ ನೀಡಲಾಗುತ್ತಿದೆ. ಕಳೆದ ೨೫ ವರ್ಷಗಳಲ್ಲಿ ೫ ಕಾಲೇಜುಗಳಲ್ಲಿ ಎಂ.ಡಿ. ಇನ್ ಯೋಗ, ಎಂ.ಡಿ. ಇನ್ ನ್ಯಾಚುರೋಪತಿ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ. ಇದಕ್ಕೂ ರಾಜ್ಯ ನೋಂದಣಿ ಬೋರ್ಡ್‌ನಿಂದ ಪರವಾನಿಗೆ ನೀಡಲಾಗುತ್ತಿದೆ. ೧೯೯೮ರಿಂದ ಬಿಎನ್‌ವೈಎಸ್ ಪಿಎಚ್‌ಡಿ ತರಗತಿಗಳು ಆರಂಭಗೊಂಡಿತು. ಇದಕ್ಕೆ ಬೆಂಗಳೂರು ವಿವಿ, ಏಮ್ಸ್, ನಿಮ್ಹಾನ್ಸ್, ರಾಜೀವ್ ಗಾಂಧಿ ವಿವಿಯಲ್ಲಿ ಪಿಎಚ್‌ಡಿಗೆ ನೇರವಾಗಿ ಮೆಡಿಕಲ್ ಕೋರ್ಸ್ ಮಾನ್ಯತೆ ಕೊಡಲಾಗಿದೆ. ೧೦೦ಕ್ಕೂ ಅಧಿಕ ಮಂದಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ.

ಪ್ರಧಾನಿಗೆ ಪತ್ರ:
ಈ ಹಿನ್ನೆಲೆಯಲ್ಲಿ ಯೋಗ ಮತ್ತು ನ್ಯಾಚುರೋಪತಿಗೆ ಆಗುತ್ತಿರುವ ತೊಡಕುಗಳನ್ನು ನಿವಾರಿಸಿ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ. ಎಚ್.ಆರ್. ನಾಗೇಂದ್ರಜೀ ಅವರು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರಿಗೆ ಪತ್ರ ಬರೆದಿದ್ದಾರೆ.

ಮೌನ ಹಾಗೂ ಉಪವಾಸ ಸತ್ಯಾಗ್ರಹ:
ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂ (ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ)ಕ್ಕೆ ಸೇರಿಸುವಂತೆ ಒತ್ತಾಯಿಸಿ ದೇಶದ ೪೨ ವಿದ್ಯಾಸಂಸ್ಥೆಗಳು ಒಟ್ಟಾಗಿ ಫೆ. ೧೨ರ ಬುಧವಾರದಂದು ಒಂದು ದಿನದ ಮೌನ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಅಂದು ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಕಚೇರಿ ಸಿಬ್ಬಂದಿಗಳು, ಯೋಗ ಮತ್ತು ನ್ಯಾಚುರೋಪತಿಯ ಫಲಾನುಭವಿಗಳು, ಹಾಗೂ ಇವುಗಳನ್ನು ಪ್ರೋತ್ಸಾಹಿಸುವ ವಿವಿಧ ಸಂಘ – ಸಂಸ್ಥೆಗಳು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿವೆ.

ಅಪಾಯ:
ಯೋಗ ಮತ್ತು ನ್ಯಾಚುರೋಪತಿಯನ್ನು ಪ್ರತ್ಯೇಕ ಸಮಿತಿ ಅಥವಾ ಎನ್‌ಸಿಐಎಸ್‌ಎಂ (ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ)ದ ಅಡಿಯಲ್ಲಿ ತಾರದೇ ಇದ್ದರೆ, ವಿಶ್ವವಿದ್ಯಾಲಯಗಳು ತಮಗೆ ಬೇಕಾದಂತೆ ಸಿಲೇಬಸ್ ತಯಾರಿಸುತ್ತವೆ. ಇಡೀ ದೇಶಕ್ಕೆ ಮಾರ್ಗದರ್ಶನ ನೀಡಬೇಕಾದ ವ್ಯವಸ್ಥೆ ಹಾಳಾಗಿ ಹೋಗುತ್ತದೆ. ಇದರಿಂದ ೪೨ ವಿದ್ಯಾಸಂಸ್ಥೆಗಳು, ೭ ಸಾವಿರ ವಿದ್ಯಾರ್ಥಿಗಳು, ೫ ಸಾವಿರ ಪದವೀಧರ ಹಾಗೂ ೧೦೦ಕ್ಕೂ ಅಧಿಕ ಡಾಕ್ಟರೇಟ್ ಪದವೀಧರರ ಭವಿಷ್ಯ ಡೋಲಾಯಮಾನವಾಗಲಿದೆ. ಮುಂದಿನ ದಿನಗಳಲ್ಲಿ ಪ್ರಪಂಚಕ್ಕೆ ಮಾರ್ಗದರ್ಶಿಯಾಗಬೇಕಾದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯಕೀಯ ಪದ್ಧತಿಯು ಕಮರಿ ಹೋಗುವ ಅಪಾಯವಿದೆ.

ಪತ್ರಿಕಾಗೋಷ್ಠಿಯಲ್ಲಿ ಉಜಿರೆ ಶಾಂತಿವನ ಟ್ರಸ್ಟ್‌ನ ನಿವೃತ್ತ ವೈದ್ಯಾಧಿಕಾರಿ ಡಾ. ರುದ್ರಪ್ಪ, ರಾಜ್ಯಾಧ್ಯಕ್ಷೆ ಡಾ. ಜ್ಯೋತಿ, ಡಾ. ಗುರುದತ್ ಉಪಸ್ಥಿತರಿದ್ದರು.