ಫೆ. 15 ರಿಂದ ಮಾ. 22 ವರೆಗೆ ಉಪ್ಪಿನಂಗಡಿಯಲ್ಲಿ ” ಮಖೆ ಜಾತ್ರೆ” – ” ಮಹಾಕಾಳಿ ಮೆಚ್ಚಿ ” – ” ದೊಂಪದ ಬಲಿ ” ಸಂಭ್ರಮ ; ಶ್ರೀ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ, ವರ್ಷಾವಧಿ ಉತ್ಸವ – ಕಹಳೆ ನ್ಯೂಸ್
ಉಪ್ಪಿನಂಗಡಿ: ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಇದರ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯರ ಉಪಸ್ಥಿತಿಯಲ್ಲಿ ಫೆ. ೧೫ರಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್‍ಯಕ್ರಮಗಳೊಂದಿಗೆ ಮಾರ್ಚ್ ೨೨ರ ತನಕ ನಡೆಯಲಿದೆ ಎಂದು ದೇವಳದ ಆಡಳಿತಾಧಿಕಾರಿ ಮತ್ತು ಕಾರ್‍ಯನಿರ್ವಹಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. ೧೫ರಂದು ೧ನೇ ಅಷ್ಟಮಿ ಮಖೆ ಕೂಟ ನಡೆಯಲಿದ್ದು, ರಾತ್ರಿ ಗಂಟೆ ೮-೩೦ರಿಂದ, ಬಲಿ ಹೊರಟು ಉತ್ಸವ-ರಥೋತ್ಸವ, ಬಲಿ, ಮಹಾಪೂಜೆ ನಡೆಯಲಿದೆ.
ಫೆ. ೧೬ರಂದು ಪ್ರಾತ:ಕಾಲ ತೀರ್ಥಸ್ನಾನ, ಬೆಳಿಗ್ಗೆ ೭.೩೦ರಿಂದ ಬಲಿ ಹೊರಟು ಉತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಫೆ. ೧೯ರಂದು ಕುಂಭಮಾಸ ೬, ಕಲ್ಕುಡ ದೈವದ ಪುನ: ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕಲ್ಕುಡ ದೈವಸ್ಥಾನದಲ್ಲಿ ಗಣಪತಿ ಹೋಮ, ಸಾನಿಧ್ಯ ಕಲಶ, ತಂಬಿಲ ಸೇವೆ, ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಸಾಂಸ್ಕೃತಿಕ ಕಾರ್‍ಯಕ್ರಮ:
ಫೆ. ೧೫ರಂದು ರಾತ್ರಿ ೮-೩೦ರಿಂದ ಭಕ್ತಿ ರಸಮಂಜರಿ ಮತ್ತು ರಾತ್ರಿ ೧೧-೩೦ರಿಂದ ತುಳು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫೆ. ೨೧ರಂದು ೨ನೇ ಮಹಾ ಶಿವರಾತ್ರಿ ಮಖೆ ಕೂಟ ನಡೆಯಲಿದೆ. ಫೆ. ೨೫ರಂದು ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಗಣಪತಿ ಹೋಮ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾ ಹೋಮ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಮಾ. ೮ರಂದು ೩ನೇ ಹುಣ್ಣಿಮೆ ಮಖೆ ಕೂಟ ಜರಗಲಿದೆ, ಮಾ. ೧೭ರಂದು ಮಹಾಕಾಳಿ ಮೆಚ್ಚಿ ಹಾಗೂ ಮಾ. ೨೨ರಂದು ದೊಂಪದ ಬಲಿ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.