Thursday, November 14, 2024
ಸುದ್ದಿ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಪತ್ತೆ: ಮಂಗಳೂರು ಕಸ್ಟಮ್ಸ್ ಜಂಟಿ ಆಯುಕ್ತ ಜಾನಸ್ ಜಾರ್ಜ್ ಹೇಳಿಕೆ-ಕಹಳೆ ನ್ಯೂಸ್

ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ನಾನಾ ರೂಪದಲ್ಲಿ ಅಕ್ರಮ ಚಿನ್ನ ಸಾಗಾಟ ಹೆಚ್ಚಾಗುತ್ತಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 52 ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ 17.65 ಕಿ.ಗ್ರಾಂ. ಚಿನ್ನ ವಶಪಡಿಸಿಕೊಂಡಿದ್ದಾರೆ.


2019 ಏಪ್ರಿಲ್‍ನಿಂದ 2020 ಜನವರಿ ತನಕ ಒಟ್ಟು 6.38 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡು ಒಟ್ಟು 52 ಪ್ರಕರಣ ದಾಖಲಿಸಿದ್ದಾರೆ. 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಜತೆಗೆ ಅಕ್ರಮ 33.48 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ ಮಾಡಿ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ದೇಶಗಳಿಂದ 3529 ವಿಮಾನ ಮತ್ತು 5,37,507 ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಕಾನೂನು ಉಲ್ಲಂಘಿಸಿ ಸೊತ್ತುಗಳನ್ನು ಸಾಗಾಟ ಮಾಡಿದ ಹಲವು ಮಂದಿಗೆ ಒಟ್ಟು 3.59 ಕೋಟಿ ರೂ. ದಂಡ ವಿಧಿಸಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಾಗಾಟ ಮಾಡಿದ 9.54 ಕೋಟಿ ರೂ. ಮೌಲ್ಯದ 23.76 ಕಿ.ಗ್ರಾಂ. ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನಾ ರೂಪದಲ್ಲಿ ಸಾಗಾಟ: ಗಲ್ಫ್ ರಾಷ್ಟ್ರಗಳಿಂದ ಚಿನ್ನವನ್ನು ನಾನಾ ರೂಪದಲ್ಲಿ ಸಾಗಾಟ ಮಾಡಿ ಸಿಕ್ಕಿ ಬಿದ್ದಿದ್ದಾರೆ. ವಿಗ್ ಒಳಗಡೆ, ಪೃಷ್ಠದ ಒಳಗಡೆ, ಕ್ಯಾಪ್ಸೂಲ್‍ಗಳ ಒಳಗಡೆ ತುಂಬಿಸಿ ಹಾಗೂ ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಪ್ಯಾಂಟ್, ಶರ್ಟ್‍ಗಳ ಜಿಪ್‍ಗಳು, ಆಟದ ಸಾಮಗ್ರಿ, ಕೊಡೆಗಳು, ಸ್ಪೀಕರ್‍ಗಳು, ಸೂಟ್‍ಕೇಸ್ ಫ್ರೇಮ್ ರೂಪದಲ್ಲಿ ಸಾಗಾಟ ಮಾಡಿದ್ದರು.
ಕಾಸರಗೋಡು, ಭಟ್ಕಳ ಮೊದಲಾದ ಕಡೆಯ ಅಕ್ರಮ ಚಿನ್ನ ಸಾಗಾಟಗಾರರು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ನೆಚ್ಚಿಕೊಂಡಿದ್ದಾರೆ. ದೇಶದ ವಿಮಾನ ನಿಲ್ದಾಣಗಳಲ್ಲಿ ಅಕ್ರಮ ಚಿನ್ನ ಸಾಗಾಟವಾಗುವ ಮಂಗಳೂರು ಕೂಡ ಒಂದಾಗಿದೆ. ಇದಕ್ಕೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿವೆ. ಕಸ್ಟಮ್ಸ್ ಅಧಿಕಾರಿಗಳು ಸವಾಲಾಗಿ ಸ್ವೀಕರಿಸಿ ಅಕ್ರಮ ಚಿನ್ನ ಸಾಗಾಟ ಮಾಡುವವರನ್ನು ಪತ್ತೆ ಮಾಡಲು ಸನ್ನದ್ಧರಾಗಿದ್ದಾರೆ ಎಂದು ಕಸ್ಟಮ್ಸ್ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.

25.57 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ
ಗುದದ್ವಾರದಲ್ಲಿ ಪೇಸ್ಟ್ ರೂಪದಲ್ಲಿ ಬರೋಬ್ಬರಿ 25.57 ಲಕ್ಷ ರೂ. ಮೌಲ್ಯದ 633 ಗ್ರಾಂ ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

 

ಕಾಸರಗೋಡು ಮೂಲದ ಸೈಫುದ್ದೀನ್ ತೆಕ್ಕಿಲ್ ಪಝೆವಳಪ್ಪಿಲ್ ಬಂಧಿತ ವ್ಯಕ್ತಿ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಬೆಳಗ್ಗೆ 4.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಚಲನ ವಲನದ ಕುರಿತು ಸಂಶಯಗೊಂಡ ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ಚಿನ್ನ ಕಳ್ಳಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ.
ಗಮ್‍ನೊಂದಿಗೆ ಚಿನ್ನ ಬೆರೆಸಿದ್ದ: ಆರೋಪಿ ಸೈಫುದ್ದೀನ್ ಚಿನ್ನವನ್ನು ಗಮ್‍ನೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ 4 ಉಂಡೆಗಳನ್ನು ತಯಾರಿಸಿದ್ದ. ಅವುಗಳನ್ನು ಗುದನಾಳದಲ್ಲಿ ಇರಿಸಿ ಮಂಗಳೂರಿಗೆ ಬಂದಿಳಿದಿದ್ದ ಎಂದು ಕಸ್ಟಮ್ಸ್ ಇಲಾಖೆ ಜಂಟಿ ಆಯುಕ್ತ ಜೋನ್ನೆಸ್ ಜಾರ್ಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮೊದಲ ಬಾರಿಗೆ ಸುದೀರ್ಘ ಕಸ್ಟಡಿ: ಆರೋಪಿಯನ್ನು 6ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.25ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದುವರೆಗೆ ಕಳ್ಳಸಾಗಾಟ ಪ್ರಕರಣಗಳಲ್ಲಿ ಇಷ್ಟು ಸುದೀರ್ಘ ಕಾಲ ಆರೋಪಿಗೆ ನ್ಯಾಯಾಂಗ ಬಂಧನ ನೀಡಿದ್ದಿಲ್ಲ. ಇಂಥ ಪ್ರಕರಣಗಳ ಗಂಭೀರತೆಯನ್ನು ನ್ಯಾಯಾಲಯಕ್ಕೆ ವಿವರಿಸಲಾಗಿದ್ದು, ಇದೇ ಮೊದಲ ಬಾರಿಗೆ ಸುದೀರ್ಘ ಅವಧಿಯ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಜಾರ್ಜ್ ಮಾದ್ಯಮಕ್ಕೆ ತಿಳಿಸಿದರು.
ಸಿಗರೆಟ್ ವಶಕ್ಕೆ: ಇನ್ನೊಂದು ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಸಿಗರೆಟ್ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಡನ್‍ಹಿಲ್ ಮತ್ತು ಗುಡಂಗ್ ಗರಮ್ ಸಿಗರೆಟ್‍ಗಳು ಇದಾಗಿದ್ದು, ತಲಾ 200 ಸಿಗರೆಟ್‍ಗಳಿರುವ 120 ಪ್ಯಾಕೆಟ್‍ಗಳು ಪತ್ತೆಯಾಗಿವೆ. ಈ ಪ್ರಕರಣ ತನಿಖೆ ಹಂತದಲ್ಲಿದೆ. ಪ್ರಸ್ತುತ ದಿನಗಳಲ್ಲಿ ಸಿಗರೆಟ್ ಕಳ್ಳಸಾಗಾಟ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಂಟಿ ಆಯುಕ್ತರು ಹೇಳಿದರು. ಕಸ್ಟಮ್ಸ್ ಸೂಪರಿಂಟೆಂಡೆಂಟ್ ಶ್ರೀನಾಥ್, ಇನ್ಸ್‍ಪೆಕ್ಟರ್ ಸಿನ್ಮಯ ಪ್ರಧಾನ್, ಡೆಪ್ಯುಟಿ ಕಮಿಷನರ್ ರಾಘವೇಂದ್ರ ಮತ್ತಿತರರಿದ್ದರು.

ಹೆಚ್ಚುತ್ತಿರುವ ಪ್ರಕರಣಗಳು: ಹೆಚ್ಚಿನ ಪ್ರಕರಣಗಳಲ್ಲಿ ಅತಿ ಸಣ್ಣ ಅವಧಿಗೆ ದುಬೈಗೆ ತೆರಳುವವರೇ ಹೆಚ್ಚಾಗಿ ಚಿನ್ನ ಕಳ್ಳಸಾಗಾಟಗಳಲ್ಲಿ ತೊಡಗಿರುತ್ತಿದ್ದರು. ಅವರನ್ನು ಪತ್ತೆಹಚ್ಚಲು ಸುಲಭವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದುಬೈನಲ್ಲಿ ಒಂದೆರಡು ವರ್ಷ ಇದ್ದು ಕೆಲಸ ಮಾಡಿ ವಾಪಸಾಗುವವರೂ ಈ ರೀತಿಯ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಕಂಡು ಬಂದಿದೆ.

ಮಂಗಳವಾರ ಬಂಧಿತ ಸೈಫುದ್ದೀನ್ ಮೊದಲ ಬಾರಿ ಕಳ್ಳಸಾಗಾಟದಲ್ಲಿ ತೊಡಗಿಕೊಂಡಿದ್ದಾನೆ. ಆತ ದುಬೈನಲ್ಲಿ ವರ್ಷಕ್ಕಿಂತಲೂ ಹೆಚ್ಚು ಕಾಲ ಕೆಲಸ ಮಾಡಿಕೊಂಡಿದ್ದ ಎಂದು ಜೋನ್ನೆಸ್ ಜಾರ್ಜ್ ಮಾದ್ಯಮಕ್ಕೆ ತಿಳಿಸಿದರು.