ವಿವೇಕಾನಂದ ಕಾಲೇಜಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಉಪನ್ಯಾಸ ಸಂವಿಧಾನವನ್ನು ವಿರೋಧಿಸಿದ ಜನರಲ್ಲಿ ಜಾಗೃತಿ ಮೂಡಿಸಿ: ಪ್ರೊ. ರಮೇಶ್ – ಕಹಳೆ ನ್ಯೂಸ್
ಪುತ್ತೂರು : ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆಯನ್ನು ನಿಯಂತ್ರಿಸಲು ಸಿಎಎ ಕಾಯ್ದೆ ಸಹಾಯ ಮಾಡುತ್ತದೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ. ಹಿಂದೂ, ಮುಸ್ಲಿಂ, ಸಿಖ್, ಬುದ್ದ, ಯಾರೇ ಅಮಾಯಕರು ಬಂದರೂ ಅವರಿಗೆ ಪೌರತ್ವವನ್ನು ಕೊಡುವುದರಲ್ಲಿ ತಪ್ಪಿಲ್ಲ ಎಂದು ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಕೆ. ಹೇಳಿದರು.
ಅವರು ಇಲ್ಲಿನ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಆಶ್ರಯದಲ್ಲಿ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣ ಸಂಘದ ಸಹಯೋಗದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಉಪನ್ಯಾಸಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.
ವಲಸೆ ಬಂದು ವಾಸಿಸುವವರ ಆಧಾರ್‍ಕಾರ್ಡ್, ಬ್ಯಾಂಕ್‍ಖಾತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಅಪಪ್ರಚಾರವಾಗುತ್ತಿದೆ. ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸಂವಿಧಾನವನ್ನು ವಿರೋಧಿಸುವ ಹುಚ್ಚು ಕಲ್ಪನೆಯನ್ನು ಬಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸಲು ಸದಾ ಸಿದ್ಧರಾಗರಬೇಕು.
ಪಕ್ಷಗಳ ಕೆಟ್ಟ ಹೋರಾಟಕ್ಕೆ ಬೆಲೆ ಕೊಡದೆ ಜನರಲ್ಲಿ ಜಾಗೃತಿಯನ್ನು ಮೂಡಿಸಿ ರಾಜ್ಯಸಭೆ ಮತ್ತು ಲೋಕ ಸಭೆಗಳು ಸೇರಿ ದೇಶದಲ್ಲಿ ಕಾನೂನು ರಚನೆ ಮಾಡಲಾಗುತ್ತದೆ. ಪೌರತ್ವ ತಿದ್ದಪಡಿ ಮಸೂದೆಯನ್ನು ಮಾಡಲು ಮೊದಲು ಕರಡು ಪ್ರತಿಯನ್ನು ಮಂಡಿಸಿ, ಸೂಚ್ಯವಾಗಿ ಆ ಬಿಲ್ ಏನು ಕೆಲಸ ಮಾಡುತ್ತದೆ ಎಂದು ತಿಳಿಸಲಾಗುತ್ತದೆ. ಎರಡನೇ ಹಂತದಲ್ಲಿ ಸಮಿತಿಯು ಅಧ್ಯಯನ ನಡೆಸಿ ಸಾರ್ವಜನಿಕ ಅಭಿಪ್ರಾಯವನ್ನು ಕೇಳಲಾಗುತ್ತದೆ.
ಆ ಕಾಯ್ದೆಯು ಅಪಾಯಕಾರಿಯಾದರೆ ಸಾರ್ವಜನಿಕರಿಗೆ ಅದನ್ನು ವಿರೋಧಿಸುವ ಅಧಿಕಾರವಿರುತ್ತದೆ. ಕೊನೆಯ ಹಂತದಲ್ಲಿ ಅಲ್ಪ ಬದಲಾವಣೆ ಮಾಡಿ ರಾಷ್ಟ್ರಪತಿಗಳ ಒಪ್ಪಿಗೆ ಮುಖಾಂತರ ಕಾನೂನು ರಚನೆಯಾಗುತ್ತದೆ. ಇಂತಹ ಕಾನೂನುಗಳು ಯಾವುದೇ ವಂಚನೆ ಇಲ್ಲದೆ ರಚಿತವಾಗಿರುತ್ತದೆ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಕ್ಯುಎಸಿ ಘಟಕದ ಸಂಯೋಜಕ ಡಾ. ಶ್ರೀಧರ ಹೆಚ್. ಜಿ. ಮಾತನಾಡಿ, ಭಾರತ ವಿಭಾಗವಾಗುವ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಶೇ. 20 ರಷ್ಟು ಭಾರತೀಯರಿದ್ದರು ಆದರೆ ಈಗ ಕೇವಲ 3 ಪ್ರತಿಶತ ಮಾತ್ರ ಹಿಂದುಗಳಿದ್ದಾರೆ. ಇನ್ನುಳಿದ 17 ಪ್ರತಿಶತ ಹಿಂದುಗಳು ಪಾಕಿಸ್ತಾನದಿಂದ ಎಲ್ಲಿಗೆ ಹೋಗಿದ್ದಾರೆಂಬುದೇ ತಿಳಿದಿಲ್ಲ.
ಇಲ್ಲಿಯವರೆಗೆ ಭಾರತದಲ್ಲಿ ಸುಮಾರು 10ಸಾವಿರ ಕುಟುಂಬಗಳಿಗೆ ಪೌರತ್ವ ಸಿಕ್ಕಿದೆ. ಈ ಪೌರತ್ವ ತಿದ್ದುಪಡಿ ಕಾಯಿದೆಯು ಯಾರಿಗೆ ಪೌರತ್ವವನ್ನು ಕೊಡಲು ಸಾಧ್ಯವಿಲ್ಲ ಮತ್ತು ಯಾರಿಗೆ ಕೊಡಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಕಾನೂನು ಮೊದಲೇ ಇದ್ದರೂ ಯಾರೂ ಗಮನ ಹರಿಸಿರಲಿಲ್ಲ ಆದರೆ ಅದನ್ನು ತಿದ್ದುಪಡಿ ಮಾಡಿದ ಕಾರಣದಿಂದ ಎಲ್ಲಡೆ ಚರ್ಚೆಗೆ ಕಾರಣವಾಗಿದೆ. ರಾಜಕಾರಣ ಬದಿಗಿಟ್ಟು ದೇಶದ ನೆಲೆಯಲ್ಲಿ ಯೋಚಿಸಬೇಕು ಆಗ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುತ್ತದೆ.
ದೀರ್ಘಕಾಲದ ಯೋಚನೆಯಿಂದ ಪರಿಪೂರ್ಣ ಯೋಜನೆಯನ್ನು ತರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ವ್ಯವಹಾರ ಸಂಘದ ಕಾರ್ಯದರ್ಶಿ ಉಜ್ವಲ್, ಉಪಕಾರ್ಯದರ್ಶಿ ಲಿಖಿತ ಉಪಸ್ಥಿತರಿದ್ದರು. ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ರವಿಕಲಾ ಪ್ರಸ್ತಾವಿಸಿದರು. ವಿದ್ಯಾರ್ಥಿ ಸಿದ್ದಣ ಸ್ವಾಗತಿಸಿದರು. ದೀಕ್ಷಾ ವಂದಿಸಿದರು. ವಿದ್ಯಾರ್ಥಿನಿ ರಕ್ಷಾ ನಿರೂಪಿಸಿದರು.