ವಿವೇಕಾನಂದ ಕಾಲೇಜಿನಲ್ಲಿ ದೇಶಪ್ರೇಮಿಗಳ ದಿನಾಚರಣೆ – ಪ್ರತಿ ಫೆಬ್ರವರಿ ಹದಿನಾಲ್ಕು ದೇಶ ಪ್ರೇಮಿಗಳ ದಿನವಾಗಲಿ : ಆದರ್ಶ ಗೋಖಲೆ – ಕಹಳೆ ನ್ಯೂಸ್
ಪುತ್ತೂರು: ಭಾರತೀಯ ಜನರ ಹೃದಯವು ನಿಮಿಷಕ್ಕೆ ಎಪ್ಪತ್ತೆರಡು ಬಾರಿ ಬಡಿಯುತ್ತದೆ ಎಂದರೆ ಅದಕ್ಕೆ ಕಾರಣರಾದವರು ನಮ್ಮ ಯೋಧರು.
ಆದರೆ ಕಳೆದ ವರ್ಷ ಫೆಬ್ರವರಿ ಹದಿನಾಲ್ಕರಂದು ಸಿ.ಆರ್.ಪಿ.ಎಫ್.ನ ಸೈನಿಕರ ಮೇಲೆ ಆಕ್ರಮಣವಾಯಿತು. ಪ್ರತಿ ಫೆಬ್ರವರಿ ಹದಿನಾಲ್ಕು ದೇಶಪ್ರೇಮಿಗಳ ದಿನವಾದರೆ ಭಾರತ ಬದಲಾವಣೆಯ ದಾರಿ ಹಿಡಿಯುತ್ತಿದೆ ಎಂದರ್ಥ. ನಾವು ಕಲಿಯುವ ಶಿಕ್ಷಣದ ಜೊತೆಗೆ ರಾಷ್ಟ್ರಭಕ್ತಿ ಉದಯಿಸದಿದ್ದರೆ ದೇಶಪ್ರೇಮ ಬರಲು ಸಾಧ್ಯವಿಲ್ಲ. ದೇಶದ ಕ್ಷಾತ್ರ ತೇಜಸ್ಸನ್ನು ಉಳಿಸಿ ಬೆಳೆಸುವ ತರುಣರು ನಾವಾಗಬೇಕು ಎಂದು ವಾಗ್ಮಿ, ಚಿಂತಕ ಆದರ್ಶ ಗೋಖಲೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಘದಿಂದ ಆಯೋಜಿಸಿದ್ದ ದೇಶಪ್ರೇಮಿಗಳ ದಿನದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.
ಪ್ರಕೃತಿಯ ಜೊತೆಗಿನ ಹೋರಾಟದಿಂದ ಗೆದ್ದು ಬರುವ ಯೋಧರ ಕಷ್ಟ, ಬವಣೆಗಳನ್ನು ನಾವು ಅರ್ಥೈಸಿಕೊಳ್ಳಬೇಕು. ಸೈನಿಕರ ತ್ಯಾಗ ವಿಶಾಲವಾದದ್ದು. ಪಾಕಿಸ್ತಾನದ ಉಗ್ರ ನೆಲೆಯ ಮೇಲೆ ಏರ್‍ಸ್ಟ್ರೈಕ್ ಮಾಡಿ ಮುನ್ನೂರಕ್ಕೂ ಹೆಚ್ಚು ಉಗ್ರಪಾತಕರನ್ನು ಕೊಂದ ಹಿರಿಮೆ ನಮ್ಮ ಭಾರತೀಯ ಯೋಧರದ್ದು. ನಮಗೆ ಇನ್ನೊಬ್ಬರ ಕನಸಿನ ಸಾಕಾರತೆಗಾಗಿ ಯೌವ್ವನ ಇರುವುದಲ್ಲ. ಅದನ್ನು ಸಮಷ್ಠಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ. ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಕೃಷ್ಣಕಾರಂತ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಂತನು ಕೆ. ಕಾರ್ಯಕ್ರಮ ನಿರೂಪಿಸಿದರು.