ಏಪ್ರಿಲ್ 4ರಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಮತ್ತು ಹೆತ್ತವರು ಮಾತ್ರವಲ್ಲ, ಶಿಕ್ಷಕರು, ಅಧಿಕಾರಿಗಳು ಕೂಡಾ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಪರೀಕ್ಷಾ ಫಲಿತಾಂಶದಲ್ಲಿ ತಮ್ಮ ಜಿಲ್ಲೆಯನ್ನು ಟಾಪ್ ಸ್ಥಾನಕ್ಕೇರಿಸಬೇಕೆಂಬ ಉತ್ಸಾಹದಲ್ಲಿ ಹೊಸ ತಂತ್ರ ಮಾಡುತ್ತಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಪಡೆಯುವ ಅಂಕ ಮುಂದಿನ ಶಿಕ್ಷಣಕ್ಕೆ ಸಂಬಂಧಿಸಿ ಮಕ್ಕಳಿಗೆ ಮಹತ್ವದ್ದಾಗಿದೆ. ಆದರೆ, ಈ ಬಾರಿ ಮಕ್ಕಳಿಗಿಂತಲೂ ಹೆಚ್ಚಾಗಿ ಶಾಲೆ ಮತ್ತು ಅಧಿಕಾರಿಗಳ ಮಟ್ಟದಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿರುವುದು ವಿಶೇಷ. ರಾಜ್ಯದೆಲ್ಲೆಡೆಯ ಜಿಲ್ಲಾಡಳಿತ, ಶಿಕ್ಷಣ ಇಲಾಖೆಗಳು ತಮ್ಮ ಜಿಲ್ಲೆಯ ಪ್ರತಿಷ್ಠೆಗಾಗಿ ಹೆಣಗುತ್ತಿದ್ದರೆ, ತಾಲೂಕುಗಳೂ ಟೊಂಕ ಕಟ್ಟಿ ನಿಂತಿವೆ. ಈ ನಡುವೆ, ಶಾಲೆಗಳು ಕೂಡಾ ಜಿದ್ದಿಗೆ ಬಿದ್ದಿವೆ.
2017-18ನೇ ಸಾಲಿನಲ್ಲಿ17ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆಮುಂದಿನ ವರ್ಷ ರಾಜ್ಯದಲ್ಲೇ 2ನೇ ಸ್ಥಾನಕ್ಕೆ ಜಿಗಿದದ್ದು, 7ನೇ ಸ್ಥಾನದಲ್ಲಿದ್ದ ಹಾಸನ ಮೊದಲ ಸ್ಥಾನಕ್ಕೆ ಏರಿತ್ತು. ಅಲ್ಲಿ ಅಧಿಕಾರಿಗಳು ನಡೆಸಿದ ತೀವ್ರ ಪ್ರಯತ್ನವೇ ಈ ಯಶಸ್ಸಿಗೆ ಕಾರಣ ಎನ್ನುವ ಲೆಕ್ಕಾಚಾರದಿಂದ ಎಲ್ಲಜಿಲ್ಲೆಗಳಲ್ಲೂ ಪೈಪೋಟಿ ಸೃಷ್ಟಿಯಾಗಿದೆ.
ಏನೆಲ್ಲ ಪ್ರಯತ್ನಗಳು?
- – ಬೆಳಗ್ಗೆ ಐದು ಗಂಟೆಗೇ ಮಿಸ್ಡ್ ಕಾಲ್ ಕೊಟ್ಟು ಎಬ್ಬಿಸುವುದು.
- – ಕೆಲವು ಕಡೆ ಬೆಳಗ್ಗೆ 8.30ರಿಂದ ರಾತ್ರಿ 7.30ರವರೆಗೂ ತರಗತಿ
- – ಪ್ರತಿಯೊಬ್ಬ ಶಿಕ್ಷಕರು, ಅಧಿಕಾರಿಗಳಿಗೆ ಮಕ್ಕಳ ಹೊಣೆ ಹಂಚಿಕೆ
- – ಹಾಸ್ಟೆಲ್‌ಗಳಲ್ಲಿ ವಿಶೇಷ ತರಗತಿ, ಅಧಿಕಾರಿಗಳ ಭೇಟಿ ತಪಾಸಣೆ
- – ಓದಿನಲ್ಲಿಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ಕ್ಲಾಸ್, ಕೌನ್ಸೆಲಿಂಗ್
- – ಮನೆಯಲ್ಲಿಟಿವಿ ಹಾಕದಂತೆ, ಮೊಬೈಲ್ ಕೊಡದಂತೆ ತಾಕೀತು
- – ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳಿಂದ ತೀವ್ರ ಮುತುವರ್ಜಿ
- – ಕೆಲವು ಅಧಿಕಾರಿಗಳಿಂದ ಶಾಲೆ ದತ್ತು ಪಡೆದು ಸ್ವಯಂ ಪಾಠ
- – ಸಮಯ ಪೋಲು ಮಾಡದಂತೆ ಮಕ್ಕಳಿಗೆ ಮನವರಿಕೆ
- – ಹಲವು ಸುತ್ತಿನ ಪರೀಕ್ಷೆ, ತಾಲೂಕು ಕೇಂದ್ರದಲ್ಲಿಎಕ್ಸಾಂ
ಖಾಸಗಿ ಪ್ಲ್ಯಾನ್ ಸರಕಾರಿ ಶಾಲೆಗೂ
ಮಕ್ಕಳನ್ನು ಬೆನ್ನು ಬಿದ್ದು ಓದಿಸುವ ಪ್ರಯತ್ನ ಖಾಸಗಿ ಶಾಲೆಗಳಲ್ಲಿಸಾಮಾನ್ಯ. ಆದರೆ, ಕಳೆದೆರಡು ವರ್ಷಗಳಿಂದ ಸರಕಾರಿ ಶಾಲೆಗಳೂ ಈ ಪ್ಲ್ಯಾನ್‌ಗೆ ತೆರೆದುಕೊಂಡಿವೆ. ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ತೋರಿಸಿ ಮಕ್ಕಳನ್ನು ಸೆಳೆಯಲು ಆರಂಭಿಸಿದ ಈ ತಂತ್ರ ಇದೀಗ ಶಾಲೆಗಳನ್ನು ಉಳಿಸಿಕೊಳ್ಳುವ ತಂತ್ರವಾಗಿಯೂ ಬಳಕೆಯಾಗುತ್ತಿದೆ. ಉತ್ತಮ ಫಲಿತಾಂಶ ಬಂದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಮಕ್ಕಳು ಬರಬಹುದು ಎನ್ನುವುದು ಶಾಲೆಗಳ ನಿರೀಕ್ಷೆ.