Wednesday, November 20, 2024
ಸುದ್ದಿ

ಫಿಲೋಮಿನಾದಲ್ಲಿ ನ್ಯಾಶನಲ್ ಲೆವೆಲ್ ಫೆಸ್ಟ್ ‘ಫಿಲೋ ವೆಂಚುರ-2020’ ಸಮಾಪನ – ಕಹಳೆ ನ್ಯೂಸ್

ಪುತ್ತೂರು: ಇಂದಿನ ಮಕ್ಕಳು ವಿದ್ಯಾರ್ಜನೆಯಲ್ಲಿ ಮುಂದೆ ಇದ್ದರೂ ಸಾಮಾನ್ಯ ಜ್ಞಾನದಲ್ಲಿ ಸೊನ್ನೆ. ವಿದ್ಯೆಯು ಮೌಲ್ಯಯುತವಾಗಿದ್ದರೆ ಮಾತ್ರ ಸುಗಂಧಭರಿತ ಅರಳಿದ ಹೂವಿನಂತಿರುತ್ತದೆ ಎಂದು ನಿವೃತ್ತ ಮುಖ್ಯ ಗುರು ಹಾಗೂ ಫಿಲಾಂತ್ರಾಪಿಸ್ಟ್ ವಿನ್ಸೆಂಟ್ ರೋಡ್ರಿಗಸ್ ಹೇಳಿದರು.


ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಯುಜಿ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಫೆಸ್ಟ್ ಅಂಡ್ ಪೀಜಿ ಪೇಪರ್ ಪ್ರೆಸೆಂಟೇಶನ್ ‘ಫಿಲೋ ವೆಂಚುರ-2020’ ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಸಮಾಜದಲ್ಲಿ ಇತರರನ್ನು ನೋಯಿಸದೆ ಶಾಂತಿ, ಸಾಮರಸ್ಯದ ಜೀವನವನ್ನು ನಡೆಸಬೇಕು. ಪ್ರೀತಿ, ವಿಶ್ವಾಸ, ವಿನಯ, ಸಮಾಧಾನ, ಸೇವಾಭಾವನೆ ಮೊದಲಾದ ಗುಣಗಳು ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ಉದ್ಯಮಿ ಜಯಂತ ನಡುಬೈಲು ಮಾತನಾಡಿ, ಉತ್ತಮ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಬದುಕು ಪ್ರಜ್ವಲಿಸುವುದು. ಪ್ರತಿವರ್ಷ ಲಕ್ಷಗಟ್ಟಲೆ ಪದವೀಧರರ ಉತ್ಪಾದನೆಯಾಗುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಪೈಪೋಟಿ ಎದುರಾಗುತ್ತದೆ. ಇಂದು ಸೋಲಿನ ದಿನವಾದರೂ ನಾಳೆಯ ದಿನ ಗೆಲುವು ಬಂದೇ ಬರುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ ಸಂಗತಿ. ಒಬ್ಬರು ಸೋಲದೆ ಇನ್ನೊಬ್ಬರು ಗೆಲ್ಲಲು ಸಾಧ್ಯವಿಲ್ಲ. ಸೋಲನ್ನು ಧನಾತ್ಮಕವಾಗಿ ಸ್ವೀಕರಿಸಿ, ಸಂಭ್ರಮಿಸುವ ಮನೋಗುಣ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಬದುಕಿಗೆ ಅಗತ್ಯವಿರುವ ಉಪಯುಕ್ತ ಅನುಭವವು ಪ್ರಾಪ್ತಿಯಾಗುತ್ತದೆ. ಈ ಶಿಕ್ಷಣ ಸಂಸ್ಥೆಯು ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಸ್ಪರ್ಧಾಳುಗಳು ಸಿಹಿ ನೆನಪುಗಳೊಂದಿಗೆ ತಮ್ಮ ಸಂಸ್ಥೆಗಳಿಗೆ ನಿರ್ಗಮಿಸಬೇಕು ಎಂದರು.
ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ವಂ. ರಿತೇಶ್ ರೋಡ್ರಿಗಸ್, ವಿದ್ಯಾರ್ಥಿ ಸಂಯೋಜಕಿ ಕವನ ಪಿ ಉಪಸ್ಥಿತರಿದ್ದರು. ಸ್ಟಾಫ್ ಸಂಯೋಜಕರಾದ ಯಶವಂತ್ ಜಿ ನಾಯಕ್, ವಂ. ಸುನಿಲ್ ಜಾರ್ಜ್ ಡಿ’ಸೋಜ, ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಮತ್ತು ನವ್ಯ ಭಟ್, ಸಹಕರಿಸಿದರು.

ಫಲಿತಾಂಶಗಳ ವಿವರ: ಈ ಸ್ಪರ್ಧೋತ್ಸವದಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ಏಳು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದ 46 ತಂಡಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಎಸ್‍ವಿಎಸ್ ಕಾಲೇಜು ಬಂಟ್ವಾಳ ಪಡೆದುಕೊಂಡರೆ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು ತನ್ನದಾಗಿಸಿಕೊಂಡಿತು.

ಫೈನಾನ್ಸ್‍ನಲ್ಲಿ ಶ್ರೀರಾಮಕುಂಜೇಶ್ವರ ಕಾಲೇಜು ರಾಮಕುಂಜ(ಪ್ರ), ಸಪ್ರದ ಕಾಲೇಜು ಬೆಟ್ಟಂಪಾಡಿ(ದ್ವಿ), ಹ್ಯೂಮನ್ ರಿಸೋರ್ಸ್‍ನಲ್ಲಿ ಎಸ್‍ವಿಎಸ್ ಕಾಲೇಜು ಬಂಟ್ವಾಳ(ಪ್ರ) ಎನ್‍ಎಮ್‍ಸಿ ಸುಳ್ಯ(ದ್ವಿ), ಮಾರ್ಕೆಟಿಂಗ್‍ನಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು(ಪ್ರ), ಎಸ್‍ವಿಎಸ್ ಕಾಲೇಜು ಬಂಟ್ವಾಳ(ದ್ವಿ), ಬಿಸಿನೆಸ್ ಕ್ವಿಜ್‍ನಲ್ಲಿ ಸಪ್ರದ ಕಾಲೇಜು ಬಂಟ್ವಾಳ(ಪ್ರ), ಸಪ್ರದ ಕಾಲೇಜು ಸುಳ್ಯ(ದ್ವಿ), ಕೊಲಾಜ್‍ನಲ್ಲಿ ಸಪ್ರದ ಕಾಲೇಜು ಜಿಡೆಕಲ್ಲು, ಪುತ್ತೂರು(ಪ್ರ), ಸಪ್ರದ ಕಾಲೇಜು ಬೆಳಂದೂರು(ದ್ವಿ), ಫೊಟೋಗ್ರಫಿಯಲ್ಲಿ üಕೆಎಸ್‍ಎಸ್ ಕಾಲೇಜು ಸುಬ್ರಹ್ಮಣ್ಯ(ಪ್ರ), ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು(ದ್ವಿ), ಬೆಸ್ಟ್ ಮ್ಯಾನೇಜರ್‍ನಲ್ಲಿ ಕಾರ್ಮೆಲ್ ಪದವಿ ಕಾಲೇಜು ಮೊಡಂಕಾಪು ಬಹುಮಾನವನ್ನು ಪಡೆದುಕೊಂಡಿದೆ. ಸ್ನಾತಕೋತ್ತರ ವಿಭಾಗದ ಪೇಪರ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ 20 ತಂಡಗಳು ಭಾಗವಹಿಸಿದ್ದು, ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗವು ‘ಬೆಸ್ಟ್ ಪೇಪರ್’ ಬಹುಮಾನ ಪಡೆದುಕೊಂಡಿತು.

ನಿವೇದಿತಾ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ಶ್ರೀರಾಮನಂದನ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸುಪ್ರಿಯಾ ಪಿ ಜಿ ಬಹುಮಾನ ವಿಜೇತರ ವಿವರ ನೀಡಿದರು. ಧನ್ಯ ಎನ್ ಕಾರ್ಯಕ್ರಮ ನಿರೂಪಿಸಿದರು.