ಪುತ್ತೂರು: ಪರಿಶ್ರಮಕ್ಕೆ ಬದಲಿ ವ್ಯವಸ್ಥೆಯೆಂಬುದಿಲ್ಲ. ನಾವು ಕೈಗೊಳ್ಳುವ ಎಲ್ಲಾ ರೀತಿಯ ಯೋಜನೆಗಳು ಪೂರ್ಣ ಪ್ರಮಾಣದ ಯಶಸ್ಸನ್ನು ಕಾಣಬೇಕಾದರೆ ಪರಿಶ್ರಮ ಅತೀ ಅಗತ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂದರ್ಶಕ ಪ್ರಾಧ್ಯಾಪಕಿ ಡಾ. ಮಂಜುಳಾ ಬಿ ಸಿ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಮಹಿಳೆಯರ ವಸತಿನಿಲಯದಲ್ಲಿ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಮುಗಿಸಿ ನಿರ್ಗಮಿಸುತ್ತಿರುವ ವಿದ್ಯಾರ್ಥಿನಿಯರಿಗೆ ಫೆಬ್ರವರಿ 20ರಂದು ಸಾಯಂಕಾಲ ಆಯೋಜಿಸಲಾದ ವಿದಾಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಹಾಸ್ಟೆಲ್ ಬದುಕು ಜೀವನಕ್ಕೆ ಬಹಳ ಅಗತ್ಯವಿರುವ ಪರಸ್ಪರ ಪ್ರೀತಿ, ವಿಶ್ವಾಸ, ಹೊಂದಾಣಿಕೆ, ಶಿಸ್ತು ಮತ್ತು ಸಮನ್ವಯತೆಯನ್ನು ಕಲಿಸಿಕೊಡುತ್ತದೆ. ಇಲ್ಲಿ ಪಡೆಯುವ ಅನುಭವಕ್ಕಿಂತ ಮಿಗಿಲಾದುದು ಇನ್ಯಾವುದೂ ಇಲ್ಲ. ಸಾಧನೆಗೆ ಧನಾತ್ಮಕ ಚಿಂತನೆಗಳು ಬಹಳ ಮುಖ್ಯ. ವೈಫಲ್ಯಗಳು ಎದುರಾದಾಗ ಮರುಪ್ರಯತ್ನದೊಂದಿಗೆ ಮುನ್ನಗ್ಗುವ ಛಲವಿರಬೇಕು ಎಂದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಮಾತನಾಡಿ, ಹಾಸ್ಟೆಲ್ ಜೀವನದ ಅನುಭವವು ಸಿಹಿ ಕಹಿ ಮಿಶ್ರಣವನ್ನು ಒಳಗೊಂಡಿರಬಹುದು. ಸಂತೋಷ ಮತ್ತು ದುಖಃದ ಸನ್ನಿವೇಶಗಳನ್ನು ಸಮಾನವಾಗಿ ಪರಿಗಣಿಸಬೇಕು. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಿದ್ಧತೆಯನ್ನು ನಡೆಸಿಕೊಳ್ಳಬೇಕು ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹಾ ಮಾತನಾಡಿ, ವಿದಾಯದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ನಿವಾಸಿಯೂ ಶಿಕ್ಷಣದ ಅವಧಿಯಲ್ಲಿ ಎಷ್ಟರ ಮಟ್ಟಿಗೆ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಯಿತು ಎಂದು ಪರಾಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ತಮ್ಮ ಹೆತ್ತವರು ಬಹಳಷ್ಟು ಕನಸುಗಳನ್ನಿಟ್ಟುಕೊಂಡು ಈ ಸಂಸ್ಥೆಗೆ ದಾಖಲಾತಿ ಮಾಡಿದ್ದಾರೆ. ಅವುಗಳನ್ನು ನನಸಾಗಿಸುವಲ್ಲಿ ಯಶಸ್ವಿಯಾಗಬೇಕು ಎಂದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿದ್ಯಾರ್ಜನೆಗೈದ ಶಿಕ್ಷಣ ಸಂಸ್ಥೆಯ ಬಗ್ಗೆ ನಿರಂತರ ಅಭಿಮಾನ ಇಟ್ಟುಕೊಳ್ಳಬೇಕು. ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಶಿಸ್ತು ಯಶಸ್ಸಿನ ಮಟ್ಟವನ್ನು ನಿರ್ಧರಿಸುತ್ತದೆ.
ಬದುಕಿನಲ್ಲಿ ಸಮಸ್ಯೆಗಳು, ಟೀಕೆಗಳು ಎದುರಾಗುವುದು ಸಹಜ. ಇವುಗಳನ್ನು ನಿಶ್ಚಿಂತೆಯಿಂದ ಎದುರಿಸಿದಾಗ ಸಾಮಥ್ರ್ಯವು ಇಮ್ಮಡಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ಮಾತನಾಡಿ, ಜೀವನದಲ್ಲಿ ಹೊಂದಾಣಿಕೆ ಅನ್ನುವುದು ಬಹಳ ಮುಖ್ಯ. ಈ ವಸತಿ ನಿಲಯದಲ್ಲಿ ಪಡೆದ ಎಲ್ಲಾ ರೀತಿಯ ಅನುಭವಗಳು ಭವಿಷ್ಯದಲ್ಲಿ ಶ್ರೇಷ್ಠ ಮಟ್ಟದ ಸಾಧಕ ಮಹಿಳೆಯರನ್ನಾಗಿಸುವಲ್ಲಿ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ವಸತಿನಿಲಯದ ವಾರ್ಡನ್ ಸಿಸ್ಟರ್ ಫ್ಲೋರಾ ಮಚಾದೊ ಸ್ವಾಗತಿಸಿದರು. ಸಂಧ್ಯಾ ವಂದಿಸಿದರು. ಪೂಜಾ ಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮನರಂಜನಾ ಕಾರ್ಯಕ್ರಮ ಜರಗಿತು.