ಬೆಂಗಳೂರು : ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಕಳೆದ 30 ವರ್ಷಗಳಿಂದ ಭಾರತದ ಪೊಲೀಸರಿಗೆ ಬೇಕಿದ್ದ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಕೊನೆಗೂ ಬೆಂಗಳೂರಿಗೆ ಕರೆ ತರಲಾಗಿದೆ.
ತಡರಾತ್ರಿ ಬಿಗಿ ಪೊಲಿಸ್ ಬಂದೋಬಸ್ತಿನಲ್ಲಿ ಬೆಂಗಳೂರಿಗೆ ಕರೆತರಲಾಗಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್‍ಗೆ ಹಣಕ್ಕೆ ಬೆದರಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ.
ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಪ್ರಕರಣಗಳಿವೆ.
ಈತನ ವಿರುದ್ಧ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಮೂಲತ ಉಡುಪಿ ಮಲ್ಪೆ ಮೂಲದ ರವಿ ಪೂಜಾರಿ ಮುಂಬೈನಲ್ಲಿಯೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದನು.
ಬಾಲಾ ಜ್ವಾಲೆಯನ್ನು ಕೊಲೆ ಮಾಡಿದ್ದ ರವಿ ಪೂಜಾರಿ ಭೂಗತ ಲೋಕದಲ್ಲಿ ಪ್ರವರ್ಧಮಾನಕ್ಕೆ ಬಂದು, ಭೂಗತ ಪಾತಕಿ ಚೋಟಾ ರಾಜನ್ ತಂಡಕ್ಕೆ ಸೇರ್ಪಡೆಯಾಗಿದ್ದನು.
1990ರಲ್ಲಿ ದುಬೈಗೆ ಎಸ್ಕೇಪ್ ಆಗಿದ್ದ ರವಿ ಪೂಜಾರಿ ಅಲ್ಲಿಂದಲೇ ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹಾರ್, ನಿರ್ಮಾಪಕ ರಾಕೇಶ್ ರೋಷನ್‍ಗೆ ಬೆದರಿಕೆ ಹಾಕಿದ್ದನು.
ತನ್ನ ಹಿಂಬಾಲಕರ ಮೂಲಕ ಮುಂಬೈನಲ್ಲಿ ಓಂಪ್ರಕಾಶ್ ಕುಕ್ರೆಜಾ ಕೊಲೆ, ಬಿಲ್ಡರ್ಸ್ ಕೊಲೆಗೆ ಯತ್ನಿಸಿದ್ದನು.
ಕಳೆದ 15 ವರ್ಷದಿಂದ ವಿದೇಶದಲ್ಲಿ ತಲೆಮಾರಿಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಕಳೆದ ವರ್ಷ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು.
ಕಳೆದ 15 ವರ್ಷದಿಂದ ದುಬೈ, ಆಸ್ಟ್ರೇಲಿಯಾ, ಆಫ್ರಿಕಾ ಸೇರಿದಂತೆ ವಿದೇಶಗಳಲ್ಲಿ ತಲೆ ಮಾರಿಸಿಕೊಂಡಿದ್ದ.
ವಿದೇಶದಲ್ಲಿಯೇ ಇದ್ದುಕೊಂಡು ಉದ್ಯಮಿ, ರಾಜಕಾರಣಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ.
ಭೂಗತವಾಗಿದ್ದುಕೊಂಡೆ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದನು.
ಈ ಹಿನ್ನೆಲೆಯಲ್ಲಿ ಪೂಜಾರಿಯ ವಿರುದ್ಧ ಕೇಂದ್ರ ಸರ್ಕಾರ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.