ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇದರ ಜಂಟಿ ಆಶ್ರಯದಲ್ಲಿ ‘ಲರ್ನ್ ಅಂಡ್ ಲೀಡ್’ ತರಬೇತಿ ಕಾರ್ಯಕ್ರಮವು ಫೆಬ್ರವರಿ 22 ರಂದು ಅಪರಾಹ್ನ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಜರಗಿತು.
ಈ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೇಸಿ ವಲಯ ತರಬೇತುದಾರ ಸೆನೆಟರ್ ಡಾ| ರಾಘವೇಂದ್ರ ಹೊಳ್ಳ ಮಾತನಾಡಿ, ಮಾನವ ಸಂಪನ್ಮೂಲ ಅನ್ನುವುದು ವಿಶ್ವ ವ್ಯಾಪಿಯಾಗಿ ಮನ್ನಣೆ ಪಡೆದಿರುವ ಅತ್ಯಮೂಲ್ಯ ಸಂಪತ್ತು. ಇದರ ಗುಣ ಮಟ್ಟವು ವಿದ್ಯಾರ್ಥಿ ದೆಸೆಯಲ್ಲಿ ನಿರ್ಧಾರವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತರಗತಿಗಳಲ್ಲಿ ಕುಳಿತು ವಿದ್ಯಾರ್ಜನೆಗೈದ ಬಳಿಕ ದೊರಕುವ ಅಂಕ ಪಟ್ಟಿಯು ವೃತ್ತಿ ಬದುಕಿಗೆ ಅಗತ್ಯವಿರುವ ಒಂದು ಪಾಸ್‍ಪೋರ್ಟ್ ಮಾತ್ರ ಆಗಿರುತ್ತದೆ.
ಶಿಕ್ಷಣದ ಸಂದರ್ಭದಲ್ಲಿ ಹಲವು ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳು ಸಿಗುತ್ತವೆ. ಆ ಮೂಲಕ ಸಿಗುವ ಮೌಲ್ಯಯುತ ಅನುಭವವೇ ಜೀವನದಲ್ಲಿ ಯಶಸ್ಸನ್ನು ಪಡೆಯಲು ಬೇಕಾಗಿರುವ ವೀಸಾ ಆಗಿರುತ್ತದೆ. ಸ್ಪಷ್ಟ ಗುರಿಯೊಂದಿಗೆ ಆಲೋಚನೆಗಳನ್ನು ಕಾರ್ಯಗತಗೊಳಿಸಿದಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಜೇಸಿ ವಲಯ ತರಬೇತುದಾರÀ ಸೆನೆಟರ್ ಜೆಸಿ| ಪಶುಪತಿ ಶರ್ಮ ಮಾತನಾಡಿ, ಮೂಲತಃ ಪ್ರತಿಯೊಬ್ಬ ವ್ಯಕ್ತಿಯೂ ನಾಯಕನಾಗಿರುತ್ತಾನೆ. ಒಬ್ಬ ಯಶಸ್ವಿ ನಾಯಕನೆನಿಸಕೊಳ್ಳಬೇಕಾದರೆ ಹಲವಾರು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಾಯಕನಾದವನು ಉತ್ತಮ ಸಂವಹನ ಕಲೆಯನ್ನು ಹೊಂದಿರುವುದರೊಂದಿಗೆ ಉತ್ತಮ ಕೇಳುಗನೂ ಆಗಿರಬೇಕು.
ಉತ್ತಮ ನಾಯಕನೆನಿಸಿಕೊಳ್ಳಬೇಕಾದರೆ ಆತ್ಮವಿಶ್ವಾಸ, ಸೃಜನಶೀಲತೆ, ಉತ್ಸಾಹ, ದೃಢ ನಿರ್ಧಾರ, ಧೈರ್ಯ, ಉದ್ದೇಶ, ಕಾರ್ಯಗತಗೊಳಿಸುವಿಕೆ, ಸಮಯದ ನಿರ್ವಹಣೆ, ಪರಿಪೂರ್ಣ ವರ್ತನೆ, ನಿರ್ಧಾರ ತೆಗೆದುಕೊಳ್ಳುವಿಕೆ ಮೊದಲಾದವುಗಳು ಬಹಳ ಅಗತ್ಯವಿದೆ. ಜೀವನದಲ್ಲಿ ಋಣಾತ್ಮಕ ಅಂಶಗಳನ್ನು ತ್ಯಜಿಸಿ, ಧನಾತ್ಮಕ ಚಿಂತನೆಗಳನ್ನು ಹೆಚ್ಚಿಸಿಕೊಂಡಾಗ ಸಮಾಜದಲ್ಲಿ ನಾಯಕನೆಂದು ಗುರುತಿಸಲ್ಪಡುತ್ತಾನೆ ಎಂದರು.
ಅಖಿಲಾ ಪ್ರಾರ್ಥಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ದಿನಕರ್ ಅಂಚನ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ವಿಜಯ ಕುಮಾರ್ ಮೊಳೆಯಾರ ವಂದಿಸಿದರು. ಪೂಜಾ ಎಂ ಕೆ ಕಾರ್ಯಕ್ರಮ ನಿರೂಪಿಸಿದರು. ಎರಡು ಗಂಟೆಗಳ ಕಾಲ ಜರಗಿದ ಈ ತರಬೇತಿ ಕಾರ್ಯಕ್ರಮದಲ್ಲಿ ಕಾಲೇಜಿನ ಎರಡು ಎನ್ನೆಸ್ಸೆಸ್ ಘಟಕಗಳ 150 ಸ್ವಯಂಸೇವಕರು ಪಾಲ್ಗೊಂಡಿದ್ದರು.