ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಕಾಂಗ್ರೆಸ್ ಹೈಕಮಾಂಡ್‍ನಿಂದ ಅಧಿಕೃತ ಘೋಷಣೆ ಹೊರ ಬಂದಿದ್ದು, ಇಷ್ಟು ದಿನಗಳ ತೆರೆಮರೆಯ ಆಟಗಳಿಗೆ ತೆರೆ ಬಿದ್ದಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರೇ ಶಾಸಕಾಂಗ ಸಭೆಯ ನಾಯಕ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ. ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ತೆರವಾದ ಸ್ಥಾನಗಳಿಗಾಗಿ ಕಾಂಗ್ರೆಸ್ ನಲ್ಲಿಯೇ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.
ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರು ವಿಪಕ್ಷ ನಾಯಕನ ಸ್ಥಾಣದ ಮೇಲೆ ಕಣ್ಣಿಟ್ಟಿದ್ರು. ಇತ್ತ ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರ ಹೆಸರು ಕೆಪಿಸಿಸಿ ಅಧ್ಯಕ್ಷರ ರೇಸ್ ನಲ್ಲಿ ಬಲವಾಗಿ ಕೇಳಿ ಬಂದಿದ್ದವು.
ಕಾರ್ಯಕಾರಿ ಅಧ್ಯಕ್ಷರನ್ನಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದ ಬೆನ್ನಲ್ಲೇ ಹೈಕಮಾಂಡ್ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಸಂಪರ್ಕಿಸಿ ಮನ ಒಲಿಸುವಂತೆ ಕೇಳಿಕೊಂಡಿತ್ತು. ಆದರೆ ಡಿಕೆ ಶಿವಕುಮಾರ್ ನನ್ನಿಂದ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.