Sunday, January 19, 2025
ಸಿನಿಮಾಸುದ್ದಿ

ಬಾಲಿವುಡ್ ಖ್ಯಾತ ನಟಿ ; ಮೋಹಕ ಚೆಲುವೆ ಶ್ರೀದೇವಿ ಇನ್ನಿಲ್ಲ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ (54) ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ ‘ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು

ಜಾಹೀರಾತು
ಜಾಹೀರಾತು
ಜಾಹೀರಾತು

13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು.

ಕನ್ನಡದ ಭಕ್ತಕುಂಬಾರ, ಬಾಲಭಾರತ, ಹೆಣ್ಣು ಸಂಸಾರದ ಕಣ್ಣು, ಯಶೋಧ ಕೃಷ್ಣ, ಸಂಪೂರ್ಣ ರಾಮಯಣ, ಪ್ರಿಯಾದಲ್ಲಿ ನಟಿಸಿದ್ದರು. ರೆಬಲ್ ಸ್ಟಾರ್ ಅಂಬರೀಶ್, ರಜನಿಕಾಂತ್ ಜೊತೆ ಅಭಿನಯಿಸಿದ್ದ ಶ್ರೀದೇವಿ 80ರ ದಶಕದಲ್ಲಿ ಬಾಲಿವುಡ್ ಪ್ರಸಿದ್ಧ ಕಲಾವಿದೆಯಾಗಿ ಮಿಂಚಿದ್ದರು.

1995ರಲ್ಲಿ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 2012ರಲ್ಲಿ ‘ಇಂಗ್ಲಿಷ್ ವಿಂಗ್ಲೀಷ್’ ನಲ್ಲಿ ಅಭಿನಯಿಸುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು.

ಹಾಸ್ಯ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಶ್ರೀದೇವಿಯರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.

https://youtu.be/VRMFe9xQTt8

ವರದಿ : ಕಹಳೆ ನ್ಯೂಸ್