ಕಲಬುರಗಿ : ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ ಮತ್ತು ವಯೋಸಹಜದಿಂದ ಶ್ವಾಸಕೋಶ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮಹ್ಮದ್ ಹುಸೇನ್ ಸಿದ್ದಿಕಿ (ವಯಸ್ಸು 76) ಅವರು ಮಾರ್ಚ್ 10 ರಂದು ನಿಧನರಾಗಿದ್ದು, ಕರೋನಾ ವೈರಸ್ನಿಂದ ಎಂಬುದು ದೃಢವಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟನೆ ನೀಡಿದಾರೆ.
ಮಹ್ಮದ್ ಹುಸೇನ್ ಸಿದ್ದಿಕಿ ಅವರು ಮಾರ್ಚ್ 9 ರಂದು ಕೆಮ್ಮು, ಜ್ವರ ಅತಿಯಾಗಿ ಕಾಣಿಸಿದ್ದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ತದನಂತರ ಅದೇ ದಿನದಂದು ರಾತ್ರಿ ವ್ಯದ್ಯಕೀಯ ಸಲಹೆ ಕಡೆಗಣಿಸಿ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೈದ್ರಾಬಾದಿನ ‘ಕೇರ್ ಹಾಸ್ಪಿಟಲ್’ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.
ಅಲ್ಲಿಯೂ ಗುಣಮುಖ ಕಾಣದ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೋಗಿಯನ್ನು ಹೈದ್ರಾಬಾದಿನ ಅಸ್ಪತ್ರೆಯಿಂದ ಮಾರ್ಚ್ 10 ರಂದು ಮಧ್ಯಾಹ್ನ ಡಿಸ್ಚಾರ್ಜ್ ಮಾಡಿಕೊಂಡು ಕಲಬುರಗಿಗೆ ಬರುವ ಮಾರ್ಗ ಮಧ್ಯದಲ್ಲಿ ರೋಗಿಯೂ ನಿಧನರಾಗಿರುತ್ತಾರೆ ಎಂದು ಡಿ.ಸಿ. ಶರತ್ ಬಿ. ಮಾಹಿತಿ ನೀಡಿದರು.
ಕೆಮ್ಮು, ಜ್ವರದಿಂದ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾದ ಕೂಡಲೆ ಇದನ್ನು ಶಂಕಿತ ಕೊರೋನಾ ವೈರಸ್ ಎಂದು ಭಾವಿಸಿಕೊಂಡು ಮಾರ್ಚ್ 9 ರಂದೇ ವ್ಯಕ್ತಿಯ ಗಂಟಲು ದ್ರವ್ಯ ಸ್ಯಾಂಪಲ್ ಪಡೆದು ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ ಇಲ್ಲಿಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇನ್ನು ನಿಧನ ಹೊಂದಿದ ವ್ಯಕ್ತಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಚಿಕಿತ್ಸೆ ನೀಡಿದ ವೈದ್ಯರು ಸೇರಿದಂತೆ 43 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಮಹ್ಮದ್ ಹುಸೇನ್ ಸಿದ್ದಿಕಿ ಅವರು ಜನವರಿ 29 ರಂದು ಸೌದಿ ಅರೇಬಿಯಾ ಪ್ರವಾಸಕ್ಕೆ ಹೋಗಿ ಫೆಬ್ರವರಿ 29 ರಂದು ಹೈದರಾಬಾದ್ ಮಾರ್ಗವಾಗಿ ಕಲಬುರಗಿಗೆ ಮರಳಿದ್ದಾರೆ. ಮರಳಿದ ನಂತರ ಆರೋಗ್ಯವಾಗಿಯೇ ಇದ್ದ ಅವರು ವಯೋಸಹಜ ಶ್ವಾಶಕೋಶ, ಕೆಮ್ಮು, ಜ್ವರ ಕಾಣಿಸಿದ್ದರಿಂದ ಮಾರ್ಚ್ 9 ರಂದು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಆರೋಗ್ಯ ಇತಿಹಾಸವನ್ನು ನೋಡಿದಾಗ ಶ್ವಾಸಕೋಶ, ಅಸ್ತಮಾ, ಬಿ.ಪಿ.ದಿಂದ ಸಹ ಅವರು ಬಳಲುತ್ತಿದ್ದರು.