ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಸಂತ ಫಿಲೋಮಿನಾ ಪ್ರೀಮಿಯರ್ ಲೀಗ್-2020’ ಇದರ ಹರಾಜು ಪ್ರಕ್ರಿಯೆಯು ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಜರಗಿತು.
ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಇವರು ಈ ಹರಾಜು ಪ್ರಕ್ರಿಯೆಗೆ ಮೊದಲ ಚೀಟಿ ಎತ್ತುವ ಮೂಲಕ ಚಾಲನೆ ನೀಡಿ, ‘ಕ್ರೀಡೆಯು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾ ಚಟುವಟಿಕೆಗಳು ಮಾನವನಲ್ಲಿ ಶಿಸ್ತು, ಸಮಯಪಾಲನೆ, ಸಹೋದರತೆ, ದೃಢತೆ, ಆತ್ಮವಿಶ್ವಾಸ ಮೊದಲಾದ ಅಂಶಗಳನ್ನು ಸೃಷ್ಟಿಸಬಲ್ಲುದು. ವಿದ್ಯಾರ್ಥಿ ಬದುಕಿನಲ್ಲಿ ಅಧ್ಯಯನದೊಂದಿಗೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಇನ್ನೂ ಕಾಲೇಜಿನ 140 ವಿದ್ಯಾರ್ಥಿ ಆಟಗಾರರು ‘ಎ’ ಮತ್ತು ‘ಬಿ’ ಗುಂಪುಗಳಲ್ಲಿ ವಿಂಗಡಣೆಗೊಂಡಿದ್ದು, ಐಪಿಎಲ್ ಮಾದರಿಯ ಈ ‘ಎಸ್‍ಪಿಎಲ್’ ಪಂದ್ಯಾಟವು ಮಾರ್ಚ್ 18 ರಿಂದ ಫಿಲೋಮಿನಾ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಶಾಶ್ವತ ಫಲಕ, ಅದೇ ರೀತಿ ರೋಲಿಂಗ್ ಟ್ರೋಫಿ, ಪದಕ ಹಾಗೂ ನಗದು ಬಹುಮಾನಗಳಿರುವುದು. ಹಾಗೆಯೇ ಶಿಸ್ತು ಬದ್ಧ ತಂಡ, ವೈಯಕ್ತಿಕ ಪ್ರಶಸ್ತಿಗಳೂ ಇರುವುದು ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.