ಕೊಚ್ಚಿ: ಕರೊನಾ ವೈರಸ್ ಅತ್ಯಂತ ಭಯಾನಕ ಎನ್ನುವುದಕ್ಕೆ ಕಾರಣವಿದೆ. ಕರೊನಾ ಸೋಂಕಿತರಿಗೆ ಮಾಮೂಲಿ ಕಾಯಿಲೆಯಿಂದ ಬಳಲುತ್ತಿರುವರಂತೆ ಜೀವಿಸುವ ಸ್ವಾತಂತ್ರ್ಯವಿಲ್ಲ. ಎಲ್ಲರಿಂದ ದೂರಾಗಿ ಪ್ರತ್ಯೇಕ ಕೋಣೆಗಳಲ್ಲೇ ಅವರು ಚಿಕಿತ್ಸೆ ಪಡೆಯಬೇಕು.
ತಮ್ಮ ಆತ್ಮೀಯರಿಂದ ಆರೈಕೆ ಮಾಡಿಸಿಕೊಳ್ಳುವಂತಹ ಭಾಗ್ಯವಂತೂ ಅವರ ಪಾಲಿನದ್ದಲ್ಲ. ಈ ರೀತಿಯ ಮಾನಸಿಕ ಹಿಂಸೆಯನ್ನು ನೀಡುವ ಕರೊನಾ ವೈರಸ್ನಿಂದಾಗಿ ನಡೆದಿರುವ ಕರುಣಾಜನಕ ಕಥೆಯೊಂದು ಇಲ್ಲಿದೆ.
ಕೇರಳ ಮೂಲದ ಲಿನೋ ಅಬೆಲ್ ಹೆಸರಿನ ವ್ಯಕ್ತಿ ಕೆಲ ವರ್ಷಗಳಿಂದ ಅರೇಬಿಯನ್ ದೇಶವಾದ ಕತಾರ್ನಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಚ್ 7ನೇ ತಾರೀಖಿನಂದು ಕೇರಳದ ಹಳ್ಳಿಯೊಂದರಲ್ಲಿರುವ ಮನೆಯಲ್ಲಿ ಮಲಗಿದ್ದ ಆತನ ತಂದೆ ಮಂಚದಿಂದ ಕೆಳಗೆ ಬಿದಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗಂಭೀರ ಕಾಯಿಲೆಯೊಂದರಿಂದ ಬಳಲುತ್ತಿದ್ದ ಅವರು ಬದುಕುವುದು ಕಷ್ಟವೆಂದು ವೈದ್ಯರು ತಿಳಿಸಿದ ಕಾರಣ ಲಿನೋ ಅವರ ಅಣ್ಣ ಆತನಿಗೆ ಕರೆ ಮಾಡಿ ತಂದೆಯನ್ನು ನೋಡಲು ಊರಿಗೆ ಬರಲು ತಿಳಿಸಿದ್ದಾರೆ. ಅದರಂತೆ ಆತ ಕಚೇರಿಗೆ ರಜೆ ಹಾಕಿ ಊರಿಗೆ ಬಂದಿಳಿದ್ದಾನೆ.
ಕತಾರ್ನ ವಿಮಾನ ನಿಲ್ದಾಣದಿಂದ ಕೊಚ್ಚಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಲಿನೋ ಆರೋಗ್ಯವಾಗಿಯೇ ಇದ್ದ. ಆದರೆ ಬಂದು ಸ್ವಲ್ಪ ಹೊತ್ತಿನಲ್ಲೇ ಆತನಿಗೆ ಕೆಮ್ಮು ಶುರುವಾಗಿದ್ದು, ಕರೊನಾ ಇರುವ ಶಂಕೆ ಮೂಡಿದೆ. ತಂದೆ ವೆಂಟಿಲೇಟರ್ ಮೂಲಕ ಉಸಿರಾಟ ಮಾಡುತ್ತಿದ್ದ ಕಾರಣ ಅಲ್ಲಿಯವರೆಗೂ ಆತನಿಗೆ ಅವರನ್ನು ಭೇಟಿ ಮಾಡಲು ಸಹ ಬಿಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಲಿನೋನಲ್ಲಿ ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಆತ ಅದೇ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಿದ್ದಾನೆ. ಕರೊನಾ ಶಂಕೆ ವ್ಯಕ್ತಪಡಿಸಿದ ವೈದ್ಯರು ಆತನನ್ನು ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಿದ್ದಾರೆ.
ತಂದೆಯ ಆರೈಕೆ ಮಾಡುವುದಕ್ಕೆಂದು ಬಂದ ಲಿನೋ ತಂದೆಯನ್ನು ನೋಡದೆ ಪ್ರತ್ಯೇಕ ಕೊಠಡಿ ಸೇರಿದ್ದಾನೆ. ದುರಾದೃಷ್ಟವಶಾತ್ ಆತನ ತಂದೆ ಕೊನೆಯುಸಿರೆಳೆದಿದ್ದು ಆಗಲೂ ಸಹ ಆತನಿಗೆ ತಂದೆಯನ್ನು ನೋಡಲು ಅವಕಾಶ ಮಾಡಿಕೊಟ್ಟಿಲ್ಲ. ಕೇವಲ ವೀಡಿಯೋ ಕಾಲ್ ಮೂಲಕ ತಂದೆಗೆ ಆತ ಅಂತಿಮ ನಮನ ಸಲ್ಲಿಸಿದ್ದಾನೆ. ಮರೋಣೋತ್ತರ ಪರೀಕ್ಷೆಯ ಕೊಠಡಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯ ಎದುರಿನಲ್ಲೇ ಇದ್ದು, ತಂದೆಯನ್ನು ಮರೊಣೋತ್ತರ ಪರೀಕ್ಷೆ ಮಾಡಿದ ನಂತರ ಆಯಂಬುಲೆನ್ಸ್ಗೆ ಹೊತ್ತೊಯ್ಯುತ್ತಿದ್ದನ್ನು ನಾನು ಗ್ಲಾಸ್ ಕಿಟಕಿಯಲ್ಲಿ ನೋಡಿದೆ ಎಂದು ಲಿನೋ ನೋವಿನಿಂದ ಹೇಳಿಕೊಂಡಿದ್ದಾರೆ.
ಈ ಕುರಣಾಜನಕ ಕಥೆಯನ್ನು ಲಿನೋ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯಾರಿಗಾದರೂ ಕರೊನಾ ಇರುವ ಶಂಕೆಯಿದ್ದರೆ ದಯಮಾಡಿ ನಿಮ್ಮನ್ನು ನೀವೇ ಪ್ರತ್ಯೇಕಿಸಿಕೊಳ್ಳಿ. ನಿಮ್ಮಿಂದ ಬೇರೆಯವರಿಗೆ ಸೋಂಕು ಹರಡದಂತೆ ಕಾಪಾಡಿ ಎಂದು ಆತ ಮನವಿ ಮಾಡಿಕೊಂಡಿದ್ದಾನೆ. (ಏಜೆನ್ಸೀಸ್)