ಬೆಂಗಳೂರು,ಮಾ.14- ರಾಯಚೂರು, ಗುಲ್ಬರ್ಗಾ, ಬಿಜಾಪುರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬದುಕು ಕಟ್ಟಿಕೊಳ್ಳಲು ಗುಳೇ ಬಂದು ವಿವಿಧ ನಗರಗಳಲ್ಲಿ ನೆಲೆಸಿದ್ದ ಸಾವಿರಾರು ಜನ ಕೊರೋನ ಭೀತಿಯಿಂದ ತಮ್ಮ ಜೀವ ಉಳಿಸಿಕೊಳ್ಳಲು ಸ್ವಗ್ರಾಮಗಳತ್ತ ತೆರಳುತ್ತಿದ್ದಾರೆ. ನಿನ್ನೆಯಷ್ಟೇ ಸರ್ಕಾರ ಒಂದು ವಾರ ಕಾಲ ಶಾಲಾಕಾಲೇಜು, ಸಭೆ-ಸಮಾರಂಭ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಿದೆ.
ಸಂಪೂರ್ಣ ರಾಜ್ಯ ಸ್ತಬ್ದಗೊಂಡಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರು ಮಹಾನಗರ ಸೇರಿದಂತೆ ವಿವಿಧ ನಗರಗಳಿಗೆ ಬಂದು ನೆಲೆಸಿದ್ದ ಕಟ್ಟಡ ಕಾರ್ಮಿಕರು, ವಿವಿಧ ಕಾರ್ಮಿಕರಿಗೆ ಕೊರೋನ ಭೀತಿ ಎದುರಾಗಿದೆ. ವಾರಗಟ್ಟಲೇ ಕೆಲಸವಿಲ್ಲದೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳೊಂದಿಗೆ ಲಗೇಜ್ ಸಮೇತ ಊರುಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂದಿದೆ.
ಇಲ್ಲಿದ್ದರೆ ಸೋಂಕು ತಗುಲಿದರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಜೀವ ಉಳಿದರೆ ಸಾಕೆಂದು ಗ್ರಾಮಗಳತ್ತ ಮುಖ ಮಾಡಿದ್ದಾರೆ. ಇನ್ನು ಕಾಲೇಜುಗಳಿಗೆ ಎರಡು ವಾರ ಕಾಲ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ಕೂಡ ತಮ್ಮ ಊರುಗಳಿಗೆ ತೆರಳುತ್ತಿದದ್ದು ಕಂಡುಬಂತು. ಅದೇ ರೀತಿ ಪಿಜಿಗಳಲ್ಲಿದ್ದ ಉದ್ಯೋಗಿಗಳು ರೂಮ್ ಖಾಲಿ ಮಾಡಿಕೊಂಡು ಊರುಗಳಿಗೆ ತೆರಳುತ್ತಿದ್ದರು. ಬೆಂಗಳೂರು ಮಹಾನಗರ ಬಿಕೋ ಎನ್ನುತ್ತಿತ್ತು. ಮಾಲ್‍ಗಳೆಲ್ಲ ಖಾಲಿ ಹೊಡೆಯುತ್ತಿದ್ದವು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್, ಬಸ್ ನಿಲ್ದಾಣ, ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಜನರ ವಿರಳವಾಗಿದೆ.
ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿದರೆ ಬೇರೆ ಕಚೇರಿಗಳು ಬಹುತೇಕ ಮುಚ್ಚಿದ್ದವು. ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆಯಿತ್ತು. ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 2ನೇ ಶನಿವಾರವಾದ ಇಂದು ಮತ್ತು ನಾಳೆ ರಜೆ ನೀಡಿಲ್ಲ. ದಿನದ 24 ಗಂಟೆಯೂ ಕರ್ತವ್ಯದ ಮೇಲೆ ಹಾಜರಿರಬೇಕೆಂದು ಸೂಚನೆ ನೀಡಲಾಗಿದೆ. ಹೊರದೇಶದಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಎಲ್ಲ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿ ತಪಾಸಣೆಗೊಳಪಡಿಸಲಾಗುತ್ತಿದೆ.
ಕೊರೋನ ಶಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿದೆ. ದೆಹಲಿಯಲ್ಲಿ ಒಬ್ಬರು, ಕರ್ನಾಟಕದಲ್ಲಿ ಒಬ್ಬರು ಸೇರಿದಂತೆ ಕೊರೋನ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರಲ್ಲಿ ಸೋಂಕಿರುವುದು ಪತ್ತೆಯಾಗಿದೆ. ತೀವ್ರ ಸಾಂಕ್ರಾಮಿಕ ರೋಗವಾಗಿರುವುದರಿಂದ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ.
ಕಲಬುರಗಿಯಲ್ಲಿ ಕೊರೋನ ಸೋಂಕಿನಿಂದ ವೃದ್ದನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬದ 46 ಮಂದಿಗೂ ಕೊರೋನ ಶಂಕೆ ವ್ಯಕ್ತವಾಗಿದ್ದು, ಅವರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯಲ್ಲಿ ಮತ್ತಿಬ್ಬರು ಮೆಕ್ಕಾದಿಂದ ಆಗಮಿಸಿದ್ದು, ಅವರನ್ನು ಕೂಡ ತಪಾಸಣೆಗೊಳಪಡಿಸಲಾಗಿದೆ.