ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಲ್ಲ ;ವದಂತಿಗಳಿಗೆ ಕಿವಿಗೊಡದಿರಿ ಎಂದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ – ಕಹಳೆ ನ್ಯೂಸ್
ಮಂಗಳೂರು, ಮಾ 15 : ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 377 ಜನರ ಸ್ಕ್ರೀನಿಂಗ್ ಮಾಡಲಾಗಿದೆ. ಇಲ್ಲಿವರೆಗೆ 106 ಜನ ಮನೆಯಲ್ಲೇ ನಿಗಾದಲ್ಲಿದ್ದಾರೆ. ಇಂದು 11 ಸ್ಯಾಂಪಲ್ ಟೆಸ್ಟ್ ಗೆ ಕಳಿಸಿದ್ದೇವೆ. ಈ ಹಿಂದೆ ಕಳುಹಿಸಿದ 8 ಸ್ಯಾಂಪಲ್ ನ ವರದಿ ಕೈ ಸೇರಿದೆ. 8 ಸ್ಯಾಂಪಲ್ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಭಾನುವಾರದಂದು 9 ಜನ ಬೇರೆ ಬೇರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಯಾರು ಕೂಡಾ ಗೊಂದಲಕ್ಕೆ ಒಳಗಾಗಬೇಡಿ ಎಂದಿರುವ ಅವರು ಸಾಮಾನ್ಯ ಶೀತ ಜ್ವರ ಕಂದು ಬಂದಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದಿದ್ದಾರೆ.
ದೂರ ಪ್ರಯಾಣ ಮಾಡಿದವರು ತಕ್ಷಣ ಆರೋಗ್ಯ ಇಲಾಖೆಯನ್ನು ಅಥವಾ ಜಿಲ್ಲಾಡಳಿತವನ್ನು ಸಂಪರ್ಕಿಸಬೇಕು. ವಿದೇಶದಿಂದ ಬಂದವರೆಲ್ಲಾ ಕಡ್ಡಾಯವಾಗಿ 14 ದಿನ ಮನೆಯಲ್ಲೇ ಇರಬೇಕು. ಹಾಸ್ಟೆಲ್ ಗಳಿಂದ ಕೋವಿಡ್ ಫ್ರೀ ಸರ್ಟಿಫಿಕೇಟ್ ಕೇಳುತ್ತಿರುವ ಮಾಹಿತಿ ಬಂದಿದೆ. ಯಾರಿಗೂ ಈ ರೀತಿಯ ಸರ್ಟಿಫಿಕೇಟ್ ತನ್ನಿ ಎಂದು ಹೇಳುವ ಅವಕಾಶ ಇಲ್ಲ ಎಂದಿರುವ ಜಿಲ್ಲಾಧಿಕಾರಿಗಳು ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿಕೊಡಿದ್ದಾರೆ.