ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ. ಉಮ್ರಾ ಯಾತ್ರೆ ಮುಗಿಸಿ ಮೆಕ್ಕಾದಿಂದ ಮರಳಿದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದು, ಕೊರೊನಾ ಭೀತಿ ಎದುರಾಗಿದೆ. ಉಪ್ಪಿನಂಗಡಿ ಸಮೀಪದ ಬೆಳ್ತಂಗಡಿ ತಾಲೂಕಿನ ಕರಾಯದ 75ರ ಹರೆಯದ ವೃದ್ದರು ಅನಾರೋಗ್ಯಕ್ಕೆ ತುತ್ತಾದವರು.
ಸದ್ಯ ಅರೋಗ್ಯ ಇಲಾಖೆ ಅವರನ್ನು ವಿಶೇಷ ನಿಗಾ ಇರಿಸಿ ತಪಾಸಣೆಗೆ ಒಳಪಡಿಸಿದೆ. ಅನಾರೋಗ್ಯಕ್ಕೆ ತುತ್ತಾಗಿರುವ ಈ ವ್ಯಕ್ತಿ ತನ್ನ ಮಗಳು ಮತ್ತು ಅಳಿಯನೊಂದಿಗೆ ಕೆಲ ದಿನಗಳ ಹಿಂದೆಯಷ್ಟೇ ಉಮ್ರಾ ಯಾತ್ರೆ ಮುಗಿಸಿ ಸ್ವದೇಶಕ್ಕೆ ಮರಳಿದ್ದರು. 15 ದಿನಗಳ ಕಾಲ ಅವರು ವಿದೇಶದಲ್ಲಿದ್ದರು.
ಕೆಲವು ದಿನಗಳಿಂದ ಶೀತ, ಕೆಮ್ಮು ನೆಗಡಿಯಿಂದ ಬಳಲುತ್ತಿರುವ ಅವರನ್ನು ಅರೋಗ್ಯ ಇಲಾಖೆಯ ನಿರ್ದೇಶನದನ್ವಯ ಆಶಾ ಕಾರ್ಯಕರ್ತೆಯರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊರೊನಾ ಶಂಕೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
ಜಿಲ್ಲಾಡಳಿತದ ನಿರ್ಲಕ್ಷ್ಯ ಆರೋಪ:
ಬೆಳ್ತಂಗಡಿ ತಾಲೂಕಿನ ಬಂಗಾಡಿಯ ಪಿಚಲಾರು ಎಂಬಲ್ಲಿಗೆ ಎರಡು ಮುಸ್ಲಿಂ ಕುಟುಂಬ ಬಂದಿದ್ದು, ಅವರನ್ನು ಕುಟುಂಬದಿಂದ ಹಾಗೂ ಗ್ರಾಮಸ್ಥರಿಂದ ಪ್ರತ್ಯೇಕಿಸಿ ವಿಶೇಷ ನಿಗಾ ಇಡುವಂತೆ ಸ್ಥಳೀಯರು ಆಗ್ರಹಿಸಿದರು. ಜಿಲ್ಲಾಡಳಿತ ತುರ್ತು ಕರ್ಮ ಕೈ ಗೊಲ್ಲುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.