Monday, November 25, 2024
ಸುದ್ದಿ

ಮಾ.22 ಸುಳ್ಯದಲ್ಲಿ‌ ಕೊರೋನಾ ಮಹಾರೋಗ ಪರಿಹಾರಕ್ಕೆ ವೇ.ಮೂ. ನಾಗರಾಜ ಭಟ್ ನೇತೃತ್ವದಲ್ಲಿ ಯಜ್ಞಕ್ಕೆ ನಿರ್ಧಾರ – ಕಹಳೆ ನ್ಯೂಸ್

ಸುಳ್ಯ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಮಾ.22ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಮಹಾಗಣಪತಿ, ನವಗ್ರಹ ಪುರಸ್ಸರ ಧನ್ವಂತರಿ ಹವನ ಸಹಿತ ಮೃತ್ಯುಂಜಯ ಮಹಾಯಾಗ

ಸುಳ್ಯ : ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಮಾ.22ರಂದು ಶ್ರೀ ಚೆನ್ನಕೇಶವ ದೇವಸ್ಥಾನ, ಸುಳ್ಯ-ಇಲ್ಲಿ ಭಾರತವನ್ನೂ ಸೇರಿ ವಿಶ್ವವ್ಯಾಪ್ತಿಯಾಗಿ ಹಬ್ಬಿ ಈಗಾಗಲೇ ಸಾವಿರಾರು ಜನರನ್ನು ಬಲಿಪಡೆದು ಲೋಕವನ್ನೇ ತಲ್ಲಣಗೊಳಿಸಿರುವ ಮಹಾಮಾರಿ “ಕೊರೋನಾ’ ಪಿಡುಗಿನ ಪರಿಹಾರಕ್ಕಾಗಿ ಲೋಕಪಾಲನಾಕರ್ತೃವಾದ ಶ್ರೀ ವಿಷ್ಣು(ಚೆನ್ನಕೇಶವನ)ವಿನ ಸನ್ನಿಧಾನದಲ್ಲಿ ಲೋಕಕಲ್ಯಾಣದ ದೃಷ್ಠಿಯಿಂದ ಸಾರ್ವಜನಿಕ ಶ್ರೀ ಮಹಾಗಣಪತಿ, ನವಗ್ರಹ ಪುರಸ್ಸರ, ಧನ್ವಂತರೀ ಹವನ ಸಹಿತ ಮೃತ್ಯುಂಜಯ ಮಹಾಯಾಗ ನೆರವೇರಿಸಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಗುವುದು ಎಂದು ಶ್ರೀ ಕೇಶವಕೃಪಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಮಾ.16ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಯಜ್ಞ ನಡೆಸುವ ಕುರಿತು ಈ ವಿವರ ನೀಡಿದರು.
ಬೆಳಗ್ಗೆ ಘಂ.8ರಿಂದ ಯಜ್ಞ ಪ್ರಾರಂಭವಾಗಲಿದ್ದು, ಹಿರಿಯ ವೈದಿಕ ವಿದ್ವಾಂಸ, ವೇದಬ್ರಹ್ಮ ಶ್ರೀ ಕೇಶವಜೋಯಿಸ, ವಿದ್ವಾನ್ ಕಿರಣಕುಮಾರ್ ಇವರ ಹಿರಿತನದಲ್ಲಿ, ಬ್ರಹ್ಮಶ್ರೀ ವೇ| ಮೂ| ಪುರೋಹಿತ ನಾಗರಾಜ ಭಟ್ ರವರ ನೇತೃತ್ವದಲ್ಲಿ ಅರಂಬೂರು ಭಾರದ್ವಾಜಾಶ್ರಮದ ಕಂಚಿಕಾಮಕೋಟಿ ವೇದವಿದ್ಯಾಲಯದ ಗುರುಗಳು ಹಾಗೂ ಶಿಷ್ಯವೃಂದದ ಸಹಕಾರಗಳೊಂದಿಗೆ ಸುಮಾರು ೫೦ಕ್ಕೂ ಮಿಕ್ಕ ಋತ್ವಿಜರ ಸಹಯೋಗದಲ್ಲಿ ಈ ಮಹಾಯಾಗವನ್ನು ನೆರವೇರಿಸಲಾಗುವುದು. ಮಧ್ಯಾಹ್ನ ೧೨ ಘಂಟೆಗೆ ವಸೋರ್ಧಾರಾ ಪೂರ್ಣಾಹುತಿ ನಡೆದು ಬಳಿಕ ಶ್ರೀ ಯಜ್ಞಸನ್ನಿಧಿಯಲ್ಲಿ ಶ್ರೀ ದೇವರ ಮುಂದೆ ಯಾವುದೇ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಲೋಕಕಂಟಕವಾಗಿರುವ ಕೊರೋನಾ ರೋಗ ವೈರಸ್ ಆದಷ್ಟು ಬೇಗ ನಿವಾರಣೆಯಾಗಲಿ ಮತ್ತು ಈಗಾಗಲೇ ರೋಗಕ್ಕೆ ತುತ್ತಾದವರು ಶೀಘ್ರವೇ ಗುಣಮುಖರಾಗಿ ಮತ್ತೆ ಈ ಜಗತ್ತು ನವಚೈತನ್ಯ ಪಡೆದು ಲೋಕಕಲ್ಯಾಣವಾಗುವಂತೆ ಪ್ರಾರ್ಥನೆ ನಡೆಸಲಾಗುವುದು. ಯಜ್ಞದಲ್ಲಿ ಹಲವು ಬಗೆಯ ಸಮಿಧೆ-ವನೌಷಧಿಗಳನ್ನು ಬಳಸಲಾಗುತ್ತಿದ್ದು, ಯಜ್ಞಪೂರ್ಣಾಹುತಿಯ ನಂತರ ವಿಶೇಷ ವೇದ ಮಂತ್ರಗಳಿಂದ ಅಭಿಮಂತ್ರಿಸಿದ ಸುಧಾ(ಅಮೃತ)ಕಲಶದ ತೀರ್ಥವನ್ನು ಸಾರ್ವಜನಿಕರಿಗೆ ಪ್ರಸಾದದ ರೂಪವಾಗಿ ವಿತರಿಸಲಾಗುವುದು. ಈ ಮಹತ್ಕಾರ್ಯಕ್ಕೆ ಶ್ರೀ ಚೆನ್ನಕೇಶವ ದೇವಳದ ಆಡಳಿತ ಮಂಡಳಿ, ಅಡ್ಕಾರು ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿ ಪೂರ್ಣ ಸಹಕಾರದೊಂದಿಗೆ ಕೈಜೋಡಿಸಿದ್ದು, ಸಾರ್ವಜನಿಕ ಬಂಧುಗಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆಯೂ ಶ್ರೀಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಮಾರಕ ರೋಗ ಚಿಕೂಗ್ ಗುನ್ಯಾ ಬಂದಾಗಲೂ ಯಾಗ ನಡೆಸಿ ಪ್ರಾರ್ಥಿಸಿದ ಬಳಿಕ ಇಳಿಮುಖವಾಗಿದ್ದು, ಬರಗಾಲ ಬಂದಾಗ ಪರ್ಜನ್ಯ ಯಾಗ ನಡೆಸಿ ಪೂರ್ಣಾಹುತಿಯ ಸಂದರ್ಭದಲ್ಲೇ ಭಾರೀಮಳೆಯಾಗಿ ಪಯಸ್ವಿನಿ ಉಕ್ಕಿ ಹರಿದು ಮರುದಿನ ಪಯಸ್ವಿನಿಗೆ ಬಾಗಿನ ಅರ್ಪಣೆ ಮಾಡುವಂತೆ ಆದದ್ದು ಹಾಗೆಯೇ, ಭಾರೀ ಮಳಿಯಿಂದ ಅತೀವೃಷ್ಠಿ ಸಂಭವಿಸಿದಾಗ ವರುಣಯಾಗ ನಡೆಸಿ ಪ್ರಾರ್ಥಿಸಿದಾಗ ಮಳೆ ಕಡಿಮೆಯಾಗಿ ಕಷ್ಟಪರಿಹಾರವಾಗಿ ಯಾಗಯಜ್ಞಗಳಿಂದ ಪರಿಸರದ ಏರುಪೇರಿಗೂ ಹಿತವನ್ನು ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಜನಾದ್ರಿ ಕ್ಷೇತ್ರದ ಧರ್ಮದರ್ಶೀ ಮಂಡಳಿ ಅಧ್ಯಕ್ಷ ಶಿವರಾಮ ರೈ ಕುರಿಯಗುತ್ತು, ಅರಂಬೂರು ಭಾರದ್ವಾಜಾಶ್ರಮದ ಹಿರಿಯ ವಿದ್ಯಾರ್ಥಿ ವೇ| ಮೂ| ಅಭಿರಾಮ ಶರ್ಮಾ, ಶ್ರೀವತ್ಸ ಭಾರದ್ವಾಜ ಉಪಸ್ಥಿತರಿದ್ದರು.