Wednesday, January 22, 2025
ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯೇ ಸುರಕ್ಷಿತ : ಹಾಸ್ಟೆಲ್ ಮಕ್ಕಳನ್ನು ಊರಿಗೆ ಕಳುಹಿಸಬೇಡಿ ಆರೋಗ್ಯ ಇಲಾಖಾಧಿಕಾರಿಗಳ ಸಭೆಯಲ್ಲಿ ಎಸಿ ಡಾ| ಯತೀಶ್ ಉಳ್ಳಾಲ್ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸರಕಾರಿ ವಸತಿ ನಿಲಯಗಳಲ್ಲಿರುವ ರಾಜ್ಯದ ಬೇರೆ ಜಿಲ್ಲೆಗಳ 10ನೇ ತರಗತಿ ಹಾಗೂ ಪಿಯುಸಿ ಮಕ್ಕಳನ್ನು ಯಾವುದೇ ಕಾರಣಕ್ಕೂ ಅವರ ಊರಿಗೆ ಕಳುಹಿಸುವುದು ಬೇಡ ಎಂದು ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್‌ರವರು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಿನಿವಿಧಾನಸೌಧದ ಸಹಾಯಕ ಕಮೀಷನರ್ ಕಚೇರಿ ಸಭಾಂಗಣದಲ್ಲಿ ಮಾ.18ರಂದು ಆರೋಗ್ಯ ಇಲಾಖಾ ವತಿಯಿಂದ ಆಯೋಜಿಸಲ್ಪಟ್ಟ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

10ನೇ ತರಗತಿ ಪರೀಕ್ಷೆ ಇನ್ನಷ್ಟೇ ನಡೆಯಬೇಕಾಗಿದೆ. ಉತ್ತರ ಕರ್ನಾಟಕ ಭಾಗದ ಹೆಚ್ಚು ಮಕ್ಕಳು ವಸತಿ ನಿಲಯಗಳಲ್ಲಿದ್ದಾರೆ. ಅವರ ಪಾಲಕರು ಮಕ್ಕಳನ್ನು ಕರೆದೊಯ್ಯಲು ಒತ್ತಡ ತರುತ್ತಿದ್ದಾರೆ ಎಂದು ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಉತ್ತರಿಸಿದ ಸಹಾಯಕ ಕಮೀಷನರ್ ಅವರು ಯಾವುದೇ ಕಾರಣಕ್ಕೂ ಈ ಮಕ್ಕಳನ್ನು ಕಳುಹಿಸುವುದು ಬೇಡ. ಪರೀಕ್ಷೆ ಮುಗಿಯುವ ತನಕ ಅವರು ಇಲ್ಲೇ ಇರಲಿ. ಉತ್ತರ ಕರ್ನಾಟಕ ಭಾಗಕ್ಕಿಂತ ದಕ್ಷಿಣಕನ್ನಡ ಜಿಲ್ಲೆಯೇ ಅವರಿಗೆ ಹೆಚ್ಚು ಸುರಕ್ಷಿತ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ವದಂತಿ’ ಗಳಿಗೆ ಕಿವಿಗೊಡಬೇಡಿ: ಅಧಿಕಾರಿಗಳು ಕೊರೊನಾ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ. ಸದಾ ಜಾಗೃತರಾಗಿರಿ. ಸತ್ಯ ವಿಚಾರಗಳನ್ನು ಹುಡುಕಿ. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಸಮಸ್ಯೆಯನ್ನು ಎದುರಿಸೋಣ ಎಂದು ಅಧಿಕಾರಿ ವರ್ಗಕ್ಕೆ ಧೈರ್ಯ ತುಂಬಿದರು. ಪ್ರತಿ ಇಲಾಖಾ ಕಚೇರಿಯಲ್ಲಿಯೂ ವೈಯುಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು.

ಕಟ್ಟಡ ಕಾರ್ಮಿಕರ ಬಗ್ಗೆ ಜಾಗ್ರತೆ ವಹಿಸಿ: ಪುತ್ತೂರು ಭಾಗದಲ್ಲಿರುವ ಕಟ್ಟಡ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ಅವರು ಆದಷ್ಟೂ ಸ್ಥಳೀಯವಾಗಿ ಕೆಲಸ ಮಾಡಲು ಅವರ ಮನವೊಲಿಸಿ. ದೂರದ ಭಾಗಗಳಲ್ಲಿರುವ ಕೆಲಸಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಅವರಿಗೆ ಮಾಹಿತಿ ನೀಡಬೇಕು ಎಂದು ಡಾ.ಯತೀಶ್ ಉಳ್ಳಾಲ್ ತಿಳಿಸಿದರು.

ಕೆ.ಎಸ್.ಆರ್.ಟಿ.ಸಿ ಚಾಲಕ, ನಿರ್ವಾಹಕರಿಗೆ ಕಡ್ಡಾಯ ಮಾಸ್ಕ್: ಕೆ.ಎಸ್.ಆರ್.ಟಿ.ಸಿ ಚಾಲಕರು ಮತ್ತು ನಿರ್ವಾಹಕರು ಜಾಗರೂಕತರಾಗಿರಬೇಕು. ಪ್ರತಿಯೋರ್ವ ನಿರ್ವಾಹಕರಿಗೂ ಮಾಸ್ಕ್ ವ್ಯವಸ್ಥೆ ಮಾಡಬೇಕು. ವೈಯುಕ್ತಿಕ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ತಹಶೀಲ್ದಾರ್ ರಮೇಶ್ ಬಾಬು, ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ. ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ, ಸಿಡಿಪಿಒ ಶ್ರೀಲತಾ, ಡಾ,ಪ್ರದೀಪ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಮತ್ತಿತರರು ಭಾಗವಹಿಸಿದ್ದರು. ತಾಲೂಕು ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ವಂದಿಸಿದರು