ಬಂಟ್ವಾಳ, ಮಾ. 27: ತಾಲೂಕಿನ ಸಜಿಪನಡು ಗ್ರಾಮದ ಹಸುಳೆಗೆ ಕೋವಿಡ್ – 19 (ಕೊರೋನ) ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಗ್ರಾಮ ಇದೀಗ ಪೊಲೀಸರ ಕಣ್ಗಾವಲಿನಲ್ಲಿ ಇದ್ದು ಗ್ರಾಮದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮನೆಯಿಂದ ಯಾರೂ ಹೊರಬಾರದಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸಜಿಪನಡು ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನೊಳಗೊಂಡ ಗ್ರಾಮ ಮಟ್ಟದ ಕಾರ್ಯಪಡೆಯನ್ನು ರಚಿಸಿ ಕೊರೋನ ಸೋಂಕು ಹರಡದಂತೆ ಮುಂಜಾಗೃತ ಕ್ರಮವಹಿಸಲು ಕಾರ್ಯಪ್ರವೃತ್ತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಂಜೆಯ ವೇಳೆಗೆ ಗ್ರಾಮಕ್ಕೆ ಭೇಟಿ ನೀಡಲಿದ್ದು, ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಹಿತ ತಾಲೂಕು ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮದ ಯಾರೂ ಕೂಡಾ ಮನೆಯಿಂದ ಹೊರ ಬರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿರುವ ಪೊಲೀಸರು, ಗ್ರಾಮದ ಯಾವುದೇ ಮನೆಗೆ ದಿನಸಿ, ಹಾಲು, ಔಷಧ ಸಹಿತ ದಿನಬಳಕೆಯ ಅಗತ್ಯ ವಸ್ತುಗಳು ಬೇಕಾದರೆ ಸ್ಥಳೀಯ 13 ಅಂಗಡಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಪಟ್ಟಿಯಲ್ಲಿ ಅಂಗಡಿ ಮಾಲಕರ ಹೆಸರು, ಮೊಬೈಲ್ ಸಂಖ್ಯೆ ಇದ್ದು ವಾಟ್ಸ್ ಆಪ್ನಲ್ಲಿ ಗ್ರಾಮದ ಜನರಿಗೆ ಕಳುಹಿಸಲಾಗಿದೆ. ಅಲ್ಲದೆ ಪ್ರಿಂಟ್ ತೆಗೆದು ಗ್ರಾಮದ ವಿವಿಧೆಡೆ ಅಂಟಿಸಲಾಗಿದೆ. ಸಾಮಗ್ರಿ ಬೇಕಾದವರು ಅಂಗಡಿಯವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಾಮಗ್ರಿಗಳ ಪಟ್ಟಿ ನೀಡಬೇಕು. ಸಾಮಗ್ರಿಗಳನ್ನು ಅಂಗಡಿಯಾತ ಅಥವಾ ಗ್ರಾಮ ಪಂಚಾಯತ್ ಸದಸ್ಯರು ಆಯಾಯ ಮನೆಗೆ ತಲುಪಿಸಲಿದ್ದಾರೆ ಎಂದು ಸೂಚನೆ ನೀಡಲಾಗಿದೆ.
ಆಶಾ ಕಾರ್ಯಕರ್ತರ ತಂಡವೊಂದನ್ನು ರಚಿಸಿದ್ದು ಈ ತಂಡದ ಸದಸ್ಯರು ಗ್ರಾಮದ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಮನೆ ಮಂದಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಜೊತೆಗೆ ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಅಲ್ಲದೆ ಸಜಿಪನಡು ಗ್ರಾಮದ ಯಾರೂ ಗ್ರಾಮದಿಂದ ಹೊರಗೆ ಹೋಗದಂತೆ ಹಾಗೂ ಹೊರಗಿನ ಯಾರೂ ಗ್ರಾಮಕ್ಕೆ ಬಾರದಂತೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ. ಸಜಿಪನಡು ಮತ್ತು ಕುಕ್ಕಾಜೆ ಗ್ರಾಮದ ರಸ್ತೆಗೆ ಕಲ್ಲುಗಳಲ್ಲಿ ಅಡ್ಡವಾಗಿ ಇಟ್ಟು ವಾಹನಗಳ ಸಂಚಾರವನ್ನು ಕೂಡಾ ನಿರ್ಬಂಧಿಸಲಾಗಿದೆ.