ಕೊರೋನಾ ಹೀರೋ: ಕೊಟ್ಟ ಮಾತಿನಂತೆ ಮಗುವಿಗೆ ಜನ್ಮ ನೀಡುವ ಒಂದು ದಿನ ಮೊದಲು ಕೋವಿಡ್ 19 ಪರೀಕ್ಷೆ ಕಿಟ್ ಸಂಶೋಧಿಸಿ ಕೊಟ್ಟ ಮಿನಾಲ್ ಭೋಸ್ಲೆ – ಕಹಳೆ ನ್ಯೂಸ್
ಪುಣೆ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಗೆ ಜನ ತತ್ತರಿಸುತ್ತಿರುವ ಈ ಹೊತ್ತಿನಲ್ಲಿ ಪುಣೆಯ ವೈಜ್ಞಾನಿಕ ಸಂಶೋಧಕಿ ಮಿನಾಲ್ ಭೋಸ್ಲೆ ಅವರು ಕೊಟ್ಟ ಮಾತಿನಂತೆ ಕೋವಿಡ್ 19 ಪರೀಕ್ಷಾ ಕಿಟ್ ಸಂಶೋಧಿಸಿ ಕೊಟ್ಟಿದ್ದಾರೆ.
ಪುಣೆಯ ಮೈಲ್ಯಾಬ್ ಡಿಸ್ಕವರಿ ಎಂಬ ಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥೆಯಾಗಿರುವ ಮಿನಾಲ್ ಬೋಸ್ಲೆ ಅವರು, ದೇಶದ ಮೊದಲ ಕೋವಿಡ್-19 ಕಿಟ್ ತಯಾರಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋವಿಡ್-19 ಕಿಟ್ ತಯಾರಿಕೆಯಲ್ಲಿ ತೊಡಗಿದ್ದ ತಂಡದ ನೇತೃತ್ವ ವಹಿಸಿದ್ದರು. ತಮ್ಮ ಮಗುವಿಗೆ ಜನ್ಮ ನೀಡುವ ಒಂದು ದಿನ ಮುಂಚೆಯಷ್ಟೇ ಮಿನಾಲ್ ಬೋಸ್ಲೆ ಕೋವಿಡ್ ಕಿಟ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದರು.
ಮೊದಲು ಕೋವಿಡ್ 19 ಪರೀಕ್ಷಾ ಕಿಟ್ ಸಂಶೋಧನೆ, ಬಳಿಕವಷ್ಟೇ ಮಗುವಿಗೆ ಜನ್ಮ ಎಂದು ಹೇಳಿದ್ದ ಮಿನಾಲ್ ಭೋಸ್ಲೆ
ಮಾರಕ ಕೊರೊನಾ ವೈರಸ್ ವಿರುದ್ಧ ಒಂದಾಗಿ ಹೋರಾಡೋಣ ಎಂಬ ಪ್ರಧಾನಿ ಮೋದಿ ಕರೆಗೆ ಇಡೀ ದೇಶ ಒಗ್ಗೂಡಿದ್ದು, ಎಲ್ಲರೂ ತಮ್ಮದೇ ಆದ ಕ್ಷೇತ್ರಗಳಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಂತೆ ಮಿನಾಲ್ ಭೋಸ್ಲೆ ಅವರೂ ಕೂಡ ತಮ್ಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಗರ್ಭವತಿಯಾಗಿದ್ದಾಗ್ಯೂ ನಿರಂತರವಾಗಿ ಕೆಲಸ ಮಾಡುತ್ತಿದ್ದ ಮಿನಾಲ್ ಭೋಸ್ಲೆ ಅವರು, ಮೊದಲು ಕೋವಿಡ್ 19 ಪರೀಕ್ಷಾ ಕಿಟ್ ಸಂಶೋಧನಾ ಕಾರ್ಯ ಪೂರ್ಣಗೊಳಿಸಿ ಬಳಿಕ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಕಿಟ್ ಸಂಶೋಧನೆ ಪೂರ್ಣಗೊಂಡ 1 ದಿನದ ಬಳಿಕ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಗರ್ಭವತಿಯಾದಾಗಲೂ ನಿರಂತರವಾಗಿ ಕೆಲಸ ಮಾಡಿದ ಆಕೆಯ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್-19 ಕಿಟ್ ತಯಾರಿಸಲು ಭಾರತ ಸರ್ಕಾರದಿಂದ ಅನುಮತಿ ಪಡೆದಿದ್ದ ಮೈಲ್ಯಾಬ್ ಡಿಸ್ಕವರಿ, ಕಿಟ್ ತಯಾರಿಕಾ ತಂಡದ ನೇತೃತ್ವವನ್ನು ಮಿನಾಲ್ ಬೋಸ್ಲೆ ಅವರಿಗೆ ನೀಡಿತ್ತು.
ಕಡಿಮೆ ಅವಧಿಯಲ್ಲಿ ಕೋವಿಡ್ 19 ಪರೀಕ್ಷೆ :
ಮಿನಾಲ್ ಭೋಸ್ಲೆ ಅವರು ತಯಾರಿಸಿರುವ ಈ ಪರೀಕ್ಷಾ ಕಿಟ್ ಅತ್ಯಂತ ಕಡಿಮೆ ಅವಧಿಯಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲಿದೆ. ಕೇವಲ 2 ರಿಂದ 2-30 ಗಂಟೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸುವ ಈ ಕಿಟ್ ಸದ್ಯ ಅತ್ಯಂತ ವೇಗವಾಗಿ ಪರೀಕ್ಷೆ ನಡೆಸುವ ಸಾಧನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ಯಾಥೋ ಡಿಟೆಕ್ಟ್ ಎಂಬ ಕೋವಿಡ್-19 ಕಿಟ್ ತಯಾರಿಸಿರುವ ಮಿನಾಲ್ ಬೋಸ್ಲೆ ನೇತೃತ್ವದ ತಂಡವನ್ನು ಖುದ್ದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಶ್ಲಾಘಿಸಿದ್ದಾರೆ.
ಕೋವಿಡ್-19 ಪರೀಕ್ಷಾ ಕಿಟ್ ತಯಾರಿಸಿದ ದೇಶದ ಮೊದಲ ಸಂಸ್ಥೆ
ಕೋವಿಡ್-19 ಕಿಟ್ ತಯಾರಿಸುವ ನೇತೃತ್ವ ವಹಿಸಿದ್ದ ಮೈಲ್ಯಾಬ್ಸ್ ಡಿಸ್ಕವರಿ ಸಂಸ್ಥೆಯ ತಂಡ, ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಿಸಿತ್ತು. ಈ ಮೂಲಕ ಇದು ಕೋವಿಡ್-19 ಪರೀಕ್ಷಾ ಕಿಟ್‍ಗಳನ್ನು ತಯಾರಿಸಿ ಮಾರಾಟ ಮಾಡಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಿನಾಲ್ ಬೋಸ್ಲೆ ನೇತೃತ್ವದ ತಂಡ ತಯಾರಿಸಿದ್ದ ಕೋವಿಡ್-19 ಕಿಟ್ ಮಾರ್ಚ್ 18 ರಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರ ಮರುದಿನವೇ ಅಂದರೆ ಮಾರ್ಚ್ 19 ರಂದು ಮಿನಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಿನಾಲ್ ಸಾಧನೆಗೆ ಅಭಿನಂದನೆಗಳ ಮಹಾಪೂರ
ದೇಶಾದ್ಯಂತ ಮಿನಾಲ್ ಹಾಗೂ ಅವರ ತಂಡದ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಗರ್ಭಿಣಿಯಾಗಿರುವುದನ್ನೂ ಲೆಕ್ಕಿಸದೇ ದೇಶದ ಒಳಿತಿಗಾಗಿ ದುಡಿದ ಮಿನಾಲ್ ಬೋಸ್ಲೆ ಅವರಿಗೆ ಧನ್ಯವಾದದ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಮಿನಾಲ್ ಅವರ ಭವಿಷ್ಯ ಸುಂದರವಾಗಿರಲಿ ಎಂದು ಎಲ್ಲರೂ ಹಾರೈಸಿದ್ದಾರೆ.