ಬೆಂಗಳೂರು,ಏ 01 : ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಈಗಾಗಲೇ ಬೆಂಗಳೂರು ನಗರವನ್ನು ಕೊರೊನಾ ವೈರಸ್ ಹಾಟ್‌ಸ್ಪಾಟ್ ಎಂದು ಘೋಷಿಸಿದ್ದು ಇದರೊಂದಿಗೆ ರಾಜ್ಯ ಸರ್ಕಾರವು ಕರ್ನಾಟಕದ ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಘೋಷಣೆ ಮಾಡಿದೆ.
ಬೆಂಗಳೂರು ಜೊತೆಗೆ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರಾಜ್ಯ ಸರ್ಕಾರವು ರೆಡ್ ಝೋನ್ ವೆಂದು ಘೋಷಿಸಿದೆ. ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಕೆಲವು ಗ್ರಾಮೀಣ ಪ್ರದೇಶಗಳನ್ನು ಬಫರ್ ಝೋನ್ ಗಳಾಗಿ ವರ್ಗೀಕರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರಕ ರೋಗದ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ಈಗಾಗಲೇ ರೆಡ್ ಝೋನ್ ನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ 1.2 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಐಟಿ ಸಂಬಂಧಿತ ನೌಕರರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಜಾಗರೂಕತೆ ವಹಿಸುವ ಅಗತ್ಯವಿದೆ ಮುಂದಿನ ಎರಡು ವಾರಗಳಲ್ಲಿ ಈ ಕ್ರಮ ಮತ್ತಷ್ಟು ಬಿಗಿಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಹೇಳಿದ್ದಾರೆ. ಈ ನಗರದಲ್ಲಿ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆಯಿದೆ ಎಂದು ಅವರು ಒತ್ತಿ ಹೇಳಿದರು.
ರೆಡ್ ಝೋನ್ ಘೋಷಣೆಯಾಗಿರುವ ನಗರ ಹಾಗ ಜಿಲ್ಲೆಗಳ ಮೇಲೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮನೆಗಳ ಬಾಗಿಲಿಗೆ ತೆರಳಿ ಕೊರೋನಾ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಕ್ವಾರಂಟೈನ್ ನಲ್ಲಿರುವ ಜನರ ಸಂಪರ್ಕದಲ್ಲಿರುವವರ ಮೇಲೂ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಈ ಜಿಲ್ಲೆಗಳಲ್ಲಿ ಘೋಷಣೆ ಮಾಡಲಾಗಿರುವ ಲಾಕ್’ಡೌನ್ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತದೆ. ಮೈಸೂರಿನಲ್ಲಿ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಂಜನಗೂಡು ಜುಬಿಲೆಂಟ್ ಕಾರ್ಖಾನೆಯ ಮತ್ತಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆತಂಕ ಹೆಚ್ಚಾಗಿದೆ.