Breaking News : ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆ ಕೃಷ್ಣ ವೇಣಿಯವರ ಮೇಲೆ ಹಲ್ಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್- ಕಹಳೆ ನ್ಯೂಸ್
ಬೆಂಗಳೂರು : ನಗರದ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಗ್ಯ ಸಂಬಂಧಿ ಸರ್ವೆ ನಡೆಸಲು ತೆರಳಿದ್ದಂತ ಆಶಾ ಕಾರ್ಯಕರ್ತೆಯ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಪೊಲೀಸರಿಗೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿತ್ತು. ಹೀಗಾಗಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಬ್ಯಾಟರಾಯನಪುರ ಸಮೀಪದ ಸಾರಾಯಿ ಪಾಳ್ಯದ ಸಾದಿಕ್ ಲೇಔಟ್ ನಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಹೆಲ್ತ್ ರಿಪೋರ್ಟ್ ಪಡೆಯಲು ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ತೆರಳಿದ್ದರು. ಈ ವೇಳೆ, ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಲ್ಲದೇ, ಯಾರಿಗೂ ಮಾಹಿತಿ ಕೊಡಬೇಡಿ ಎಂದು ಆವಾಜ್ ಹಾಕಿ ಮೊಬೈಲ್, ಬ್ಯಾಗ್ ನ್ನು ಕಿತ್ತುಕೊಂಡು ಹೆಲ್ತ್ ರಿಪೋರ್ಟ್ ನ್ನು ಹರಿದುಹಾಕಿದ್ದರು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್, ತಪ್ಪಿತಸ್ಥರನ್ನು ಬಂಧಿಸುವಂತೆ ಸೂಚಿಸಿದ್ದರು. ಹೀಗಾಗಿ ಸಾದಿಕ್ ಲೇಔಟ್ ಗೆ ನುಗ್ಗಿದ್ದ ಪೊಲೀಸರು, ವೀಡಿಯೋ ದೃಶ್ಯಾವಳಿ ಆಧರಿಸಿ ಕೆಲ ಹಲ್ಲೆ ಕೋರರನ್ನು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಆಶಾ ಕಾರ್ಯಕರ್ತೆ, ನರ್ಸ್ ಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 504, 188, 143, 149 ಅಡಿ ಪ್ರಕರಣ ದಾಖಲಾಗಿದೆ. ಅಲ್ಲದೇ ತಲೆ ಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇಂತಹ ಬಲೆಗೆ ಮೂವರು ಆರೋಪಿಗಳು ಬಿದ್ದಿದ್ದು, ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.