‘ಕೊರೊನಾ ಅಂಧಕಾರ ಓಡಿಸಲು ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗೋಣ, ನಾವು ಯಾರೂ ಒಂಟಿಯಲ್ಲ ಎಂದು ಸಾರೋಣ’ – ಏ. 5 ರಂದು 9 ಗಂಟೆಗೆ 9 ನಿಮಿಷ ದೀಪ ಬೆಳಗಲು ಕರೆ ನೀಡಿದ ಪ್ರಧಾನಿ ಮೋದಿ – ಕಹಳೆ ನ್ಯೂಸ್
ನವದೆಹಲಿ, ಎ.03 : ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗಾಗಿ ಶುಕ್ರವಾರ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದು ‘ಕೊರೊನಾ ಅಂಧಕಾರ ಓಡಿಸಲು ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗೋಣ, ನಾವು ಯಾರೂ ಒಂಟಿಯಲ್ಲ ಎಂದು ಸಾರೋಣ’ ಎಂಬ ಸಂದೇಶ ನೀಡಿದರು.
ಈ 11 ನಿಮಿಷ 30 ಸೆಕೆಂಡ್‌ಗಳ ವಿಡಿಯೊದಲ್ಲಿ, ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಗೆ ಎಲ್ಲರೂ ಮನೆಯ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ, ರಾತ್ರಿ 9ಕ್ಕೆ ಸರಿಯಾಗಿ ಮನೆಯ ಮಹಡಿಯ ಮೇಲೆ ಅಥವಾ ಮನೆಯಿಂದ ಮುಂದೆ ನಿಂತು 9 ನಿಮಿಷಗಳ ವರೆಗೂ ಮೇಣದ ಬತ್ತಿ ಅಥವಾ ದೀಪ ಬೆಳಗಬೇಕು. ಈ ಮೂಲಕ ಒಂದೇ ಸಮಯಕ್ಕೆ ದೇಶದ ಎಲ್ಲರೂ ಪ್ರಕಾಶವನ್ನು ಬೆಳಗುವ ಮೂಲಕ ಜೊತೆಯಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಸಾರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮನೆಯಲ್ಲಿ ಒಬ್ಬರೇ ಏನು ಮಾಡಬೇಕು. ವೈರಸ್ ವಿರುದ್ಧದ ಯುದ್ಧವನ್ನು ಒಬ್ಬರೇ ಹೇಗೆ ಹೋರಾಡಲು ಸಾಧ್ಯವಾಗುತ್ತದೆ. ನಾವು ಮನೆಯೊಳಗೆ ಇದ್ದೇವೆ, ಆದರೆ ನಾವು ಯಾರೂ ಒಂಟಿಯಲ್ಲ. ದೇಶದ ಎಲ್ಲ ಜನರೂ ನಮ್ಮೊಂದಿಗಿದ್ದಾರೆ. ಜನರ ಒಗ್ಗಟ್ಟಿನ ಶಕ್ತಿ ಆಗಾಗ್ಗೆ ವ್ಯಕ್ತವಾಗುತ್ತಲೇ ಇರುತ್ತದೆ ಎಂದು ತಿಳಿಸಿದರು.
‘ಏಪ್ರಿಲ್ 5ರಂದು ಭಾನುವಾರ, ಕೊರೊನಾ ಸಂಕಟದ ಅಂಧಕಾರವನ್ನು ಓಡಿಸಲು ರಾತ್ರಿ 9 ಗಂಟೆಗೆ ನಿಮ್ಮೆಲ್ಲರಿಂದ 9 ನಿಮಿಷ ಬೇಕು. ಎಲ್ಲರೂ ವಿದ್ಯುತ್ ಬಂದ್ ಮಾಡಿ, ನಿಮ್ಮ ಮನೆಯ ಮಹಡಿಗಳಲ್ಲಿ ನಿಂತು, ಮೇಣದ ಬತ್ತಿ, ದೀಪ, ಟಾರ್ಚ್ ಅಥವಾ ಮೊಬೈಲ್ ಲೈಟ್ ಹಿಡಿದು ಒಂಬತ್ತು ನಿಮಿಷಗಳವರೆಗೂ ಬೆಳಗಿ. ಈ ಪ್ರಕಾಶದಿಂದ, ಉಜ್ವಲದಿಂದ ನಮ್ಮ ಮನದಲ್ಲಿ ನಾವು ಒಂಟಿಯಲ್ಲ ಎಂಬ ಸಂಕಲ್ಪ ಮಾಡಿ. ಯಾರೂ ಇಲ್ಲಿ ಒಂಟಿಯಲ್ಲ. 130 ಕೋಟಿ ಜನರು ಜೊತೆಗಿದ್ದೇವೆ. ಆದರೆ, ಇದರಿಂದ ಯಾರಿಗೂ, ಎಲ್ಲಿಯೂ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು. ಅದನ್ನು ನೀವೆಲ್ಲರು ಗಮನಿಸಬೇಕು. ಗುಂಪು ಗೂಡಬಾರದು, ನಿಮ್ಮ ಮನೆಗಳಿಂದಲೇ ಆಚರಿಸಿ ಎಂದು ತಿಳಿಸಿದರು.