ಬಂಟ್ವಾಳ, ಎ.03 : ಆರೋಗ್ಯ ಇಲಾಖೆಯ ಅಡಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತರನ್ನು ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂದು ಗುರುತಿಸಲಾಗಿದೆ.
ಎಪ್ರಿಲ್ ಒಂದರಂದು ಆರೋಗ್ಯ ಇಲಾಖೆಯ ಅಡಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ಅಮ್ಟಾಡಿ ಗ್ರಾಮದ ತುಳಸಿ (48) ಎಂಬವರು ಕೊರೊನಾ ಮುಂಜಾಗೃತಾ ಕರ್ತವ್ಯದ ನಿಮಿತ್ತ ವಿದೇಶದಿಂದ ಆಗಮಿಸಿರುವ ಕಿನ್ನಿಬೆಟ್ಟು ನಿವಾಸಿ ನಿತೇಶ ಹಾಗೂ ಕಲಾಯಿ ನಿವಾಸಿ ಜಯಂತ ಎಂಬವರುಗಳ ಆರೋಗ್ಯವನ್ನು ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದ್ದರು.
ಆ ದಿನ ಸಂಜೆಯೇ ಸುಮಾರು 6 ಗಂಟೆಗೆ ವಿದೇಶದಿಂದ ಆಗಮಿಸಿರುವ ನಿತೇಶ ಎಂಬಾತನ ಸಂಬಂಧಿ ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂಬವರು ಆಶಾ ಕಾರ್ಯಕರ್ತೆಗೆ ಮೊಬೈಲ್ ಮೂಲಕ ಕರೆಮಾಡಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಪ್ರಿಲ್ 2 ರಂದು ದೂರು ನೀಡಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.