Breaking News : ಇನ್ನೂ ಒಂದು ವಾರ ರಾಜ್ಯದಲ್ಲಿ ಗುಡುಗು ಸಮೇತ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ – ಕಹಳೆ ನ್ಯೂಸ್
ಬೆಂಗಳೂರು, ಏಪ್ರಿಲ್ 6: ಕಾದಿದ್ದ ಧರೆಗೆ ಮಳೆರಾಯ ತಂಪೆರೆದಿದ್ದಾನೆ. ಅಯ್ಯೋ ಬಿಸಿಲು ಸಾಕಾಯ್ತಪ್ಪ ಎನ್ನುವವರ ಮುಖದಲ್ಲಿ ಮಂದಹಾಸ ಮೂಡಿದೆ.
ದಿನ ಕಚೇರಿಯಲ್ಲಿ ಎಸಿ ರೂಮಿನಲ್ಲಿ ಕೂತು ಕೆಲಸ ಮಾಡುವವರಿಗೆ ಈ ಲಾಕ್‌ಡೌನ್‌ನಿಂದಾಗಿ ಸೆಕೆ ಎಂದರೆ ಹೇಗಿರುತ್ತೆ ಎನ್ನುವ ದರ್ಶನವಂತೂ ಆಗಿತ್ತು. ಇದೀಗ ಬೆಂಗಳೂರಿನ ಕೆಲವೆಡೆ ಮಳೆಯಾಗಿದೆ.
ಮುಂದಿನ ಒಂದು ವಾರಗಳ ಕಾಲ ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಕರ್ನಾಟಕದಲ್ಲೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಪ್ರತಿ ವರ್ಷವೂ ಬೇಸಿಗೆ ಆರಂಭವಾಗಿ ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆ, ಭೂಮಿ ಕಾಯುತ್ತಿದ್ದಂತೆ ಮಳೆ ಬರುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಕಳೆದ ವರ್ಷ ಬೆಂಗಳೂರಿನಲ್ಲಿ ಮಳೆಯೇ ಆಗಿಲ್ಲ. ಹೀಗಾಗಿ ನೆಂಟರಂತೆ ಆಗೊಮ್ಮೆ ಈಗೊಮ್ಮೆ ಬರುವ ಮಳೆಗಾಗಿ ಬೆಂಗಳೂರು ಜನತೆ ಕಾಯುತ್ತಿತ್ತು.
ಉತ್ತರಹಳ್ಳಿ, ಕೆಂಗೇರಿ, ಮೈಸೂರು ರಸ್ತೆ, ಮಲ್ಲೇಶ್ವರ, ಹೊಸಕೆರೆಹಳ್ಳಿ,ಜಯನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಇನ್ನೂ ಉತ್ತರ ಕರ್ನಾಟಕದ ಹಾವೇರಿಯ ಬ್ಯಾಡಗಿಯಲ್ಲೂ ಮಳೆ ಸುರಿಯುತ್ತಿದೆ. ದಾವಣಗೆರೆಯ ಹರಪನಹಳ್ಳಿಯಲ್ಲಿ ಕೂಡ ಮಳೆಯಾಗಿದೆ. ರಾಣೆಬೆನ್ನೂರಿನಲ್ಲಿ ಗುಡುಗು ಸಮೇತ ಮಳೆಯಾಗುತ್ತಿದೆ.
ಭಾನುವಾರ ಧರ್ಮಸ್ಥಳ, ಬಾದಾಮಿ, ಸಂಕೇಶ್ವರ, ಬಾಳೆ ಹೊನ್ನೂರು, ಮಡಿಕೇರಿ, ಚಿಕ್ಕಮಗಳೂರು, ಉಚ್ಚಂಗಿದುರ್ಗಾ, ಶ್ರವಣಬೆಳಗೊಳದಲ್ಲಿ ಮಳೆಯಾಗಿದೆ.
ಕಲಬುರಗಿಯಲ್ಲಿ 40.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.