ನವದೆಹಲಿ: ಕೊರೊನವೈರಸ್ ತಡೆಗೆ ದೇಶದಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್ ನ 14 ನೇ ದಿನವಾದ ಮಂಗಳವಾರದವರೆಗೆ ಮಾರಕ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 114ಕ್ಕೆ ಏರಿದ್ದು, 4,500 ಗಡಿಯತ್ತ ಸೋಂಕಿತರ ಸಂಖ್ಯೆ ತಲುಪುತ್ತಿದೆ.
ವೈರಸ್ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಳೆದ 24 ಗಂಟೆಗಳಲ್ಲಿ ವೈರಸ್’ಗೆ ದೇಶದಾದ್ಯಂತ ಐವರು ಸಾವನ್ನಪ್ಪಿದ್ದು, 354 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ 4421ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಈಗಾಗಲೇ 325 ಮಂದಿ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆಂದು ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 45 ಮಂದಿ ಸೋಂಕಿಗೆ ಬಲಿಯಾಗಿದ್ದರೆ, ನಂತರ ಸ್ಥಾನದಲ್ಲಿರುವ ಗುಜರಾತ್ ನಲ್ಲಿ 11, ಮಧ್ಯಪ್ರದೇಶ 9, ತೆಲಂಗಾಣ ಮತ್ತು ದೆಹಲಿದಲ್ಲಿ ತಲಾ 7, ತಮಿಳುನಾಡು ಮತ್ತು ಪಂಜಾಬ್ ನಲ್ಲಿ ತಲಾ 6 ಸಾವುಗಳು ಸಂಭವಿಸಿವೆ. ತಮಿಳುನಾಡಿನಲ್ಲಿ ಹೊಸ 50 ಹೊಸ ಪ್ರಕರಣಗಳು ದೃಢಪಡುವುದರೊಂದಿಗೆ ಸೋಮವಾರ ಪ್ರಕರಣಗಳ ಒಟ್ಟು ಸಂಖ್ಯೆ 621 ಕ್ಕೆ ತಲುಪಿದೆ.
ಇದರಂತೆ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕೇರಳ ಮತ್ತು ತೆಲಂಗಾಣಗಳು ಸೋಂಕಿನಿಂದ ಹೆಚ್ಚು ಬಾಧಿತ ರಾಜ್ಯಗಳೆನಿಸಿವೆ.
ಏ.4ಕ್ಕೆ 600 ಪ್ರಕರಣಗಳು ಪತ್ತೆಯಾಗಿದ್ದೇ ಈ ವರೆಗಿನ ದಾಖಲೆಯಾಗಿತ್ತು. ಮುಂದಿನ ವಾರ ಕೊರೋನಾ ತನ್ನ ಪ್ರತಾಯವನ್ನು ಮತ್ತಷ್ಟು ಹೆಚ್ಚಿಸಿಲಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಮುಂದಿನ ವಾರ ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ. ಈ ಮಧ್ಯೆ ದೇಶದಲ್ಲಿ ಸೋಮವಾರ 11 ಮಂದಿ ಮೃತಪಟ್ಟಿದ್ದಾರೆ.