ನವದೆಹಲಿ: ಕೊರೋನಾವೈರಸ್ ಕಾರಣ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಬದುಕಿಗಾಗಿ ಲೈಂಗಿಕ ಕಾರ್ಯಕರ್ತೆಯರು ಪರಿತಪಿಸುವಂತಾಗಿದೆ.
ಬಡತನ, ಕೌಟುಂಬಿಕ ಹಿಂಸೆ, ವಿಚ್ಚೇದನ, ಪತಿ ನಿಧನ ಮತ್ತಿತರ ನಾನಾ ಕಾರಣಗಳಿಂದ ವೇಶ್ಯಾವಾಟಿಕೆಯನ್ನೆ ತಮ್ಮ ಬದುಕಿಗಾಗಿ ಅವಲಂಬಿಸಿದ ಸಾವಿರಾರು ಲೈಂಗಿಕ ಕಾರ್ಯಕರ್ತೆಯರು ಲಾಕ್ ಡೌನ್ ನಿಂದಾಗಿ ಒಂದೂ ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಆದಾಗ್ಯೂ, ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸಂಕಷ್ಟದಲ್ಲಿರುವ ಲೈಂಗಿಕ ಕಾರ್ಯಕರ್ತೆಯರಿಗೆ ಆಹಾರವನ್ನು ಒದಗಿಸುವ ಕೆಲಸ ಮಾಡುತ್ತಿವೆ.
ಲಾಕ್ ಡೌನ್ ಮುಂದುವರೆದಿರುವುದರಿಂದ ಮುಂಬೈನ ರೆಡ್ ಲೈಟ್ ಏರಿಯಾ ಕಾಮಾಟಿಪುರದ ಲೈಂಗಿಕ ಕಾರ್ಯಕರ್ತೆಯರು ಜೀವನ ನಡೆಸುವುದೇ ಕಷ್ಟಕರವಾಗಿದೆ.ಮನೆಯಿಂದ ಹೊರಗೆ ಬರಲು ಪೊಲೀಸರು ಬಿಡುತ್ತಿಲ್ಲ.ಹಾಗಾಗೀ ಅವರಿಗೆ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದರ ಪ್ರಾಜೆಕ್ಟ್ ಮ್ಯಾನೇಜರ್ ಅಜಿತ್ ಬಂಡೇಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ನಮಗೆ ಯಾವುದೇ ರೀತಿಯ ಪಡಿತರ ಸಿಗುತ್ತಿಲ್ಲ, ಸ್ವಯಂ ಸೇವಾ ಸಂಸ್ಥೆಗಳು ನೀಡುತ್ತಿರುವ ಆಹಾರವನ್ನು ಸೇವಿಸುತ್ತಿರುವುದಾಗಿ ಲೈಂಗಿಕ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ. ಸರ್ಕಾರದಿಂದ ತಮಗೆ ಪ್ಯಾಕೇಜ್ ನೀಡುವಂತೆ ಮತ್ತೊಬ್ಬರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಯೂ ಲೈಂಗಿಕ ಕಾರ್ಯಕರ್ತೆಯರ ಜೀವನ ದುಸ್ಥರವಾಗಿದೆ. ಮೆಜೆಸ್ಟಿಕ್, ಕೆಜಿ ರಸ್ತೆ, ಎಂಜಿ ರಸ್ತೆ ಮೊದಲಾದ ಕಡೆಗಳಲ್ಲಿ ರಾತ್ರಿ ಏಳು ಆಗುತ್ತಿದ್ದಂತೆ ಗಿರಾಕಿಗಾಗಿ ಕಾಯುತ್ತಿದ್ದ ಲೈಂಗಿಕ ಕಾರ್ಯಕರ್ತೆಯರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದು, ದಿನನಿತ್ಯ ಯಾತನೆ ಅನುಭವಿಸುತ್ತಿದ್ದಾರೆ.