ಮಂಗಳೂರಿನಲ್ಲಿ ‘ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಕೊರೊನಾ ಸೋಂಕು ವರದಿ’- ವೆನ್ಲಾಕ್ ನಲ್ಲಿ ಪ್ರಯೋಗಾಲಯ ಅಧಿಕೃತ ಆರಂಭ – ಕಹಳೆ ನ್ಯೂಸ್
ಮಂಗಳೂರು,ಏ 07 :ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವೈರಾಣು ಪರೀಕ್ಷಾ ಪ್ರಯೋಗಾಲಯ ಅಧಿಕೃತವಾಗಿ ಆರಂಭವಾಗಿದೆ.
ವೆನ್ಲಾಕ್ ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯವು ಸರಕಾರದಿಂದ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಸುಸೂತ್ರ ಕಾರ್ಯಾರಂಭಕ್ಕೆ ಅನುಮತಿ ದೊರಕಿದೆ. ಹೀಗಾಗಿ ಮಹಾಮಾರಿ ಕೊರೊನಾ ಸೊಂಕಿನ ಪರೀಕ್ಷಾ ವರದಿ ಬೆಂಗಳೂರು, ಶಿವಮೊಗ್ಗದಿಂದ ಬರುವಿಕೆಗಾಗಿ ಕಾಯುವುದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದ್ದು, ತತ್‌ಕ್ಷಣವೇ ವರದಿ ಲಭ್ಯವಾಗಲಿದೆ.
ಇದರಿಂದ ಅಗತ್ಯ ಕ್ರಮಗಳನ್ನುಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅನುಕೂಲವಾಗಲಿದೆ. ದ.ಕ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ಇದು ಸಹಕಾರಿಯಾಗಲಿರುವುದು ವಿಶೇಷ.
ಮಂಗಳೂರಿನಲ್ಲಿ ಕೊರೊನಾ ಸಹಿತ ವೈರಾಣು ಪತ್ತೆ ಪ್ರಯೋಗಾಲಯ ಆರಂಭಕ್ಕೆ ಮಂಜೂರಾತಿ ದೊರಕಿ ಏ. 1ರಿಂದ ಇದರ ಪ್ರಯೋಗಿಕ ಪರೀಕ್ಷೆ ಆರಂಭವಾಗಿತ್ತು. ಇದೀಗ ಏ.7 ರಿಂದ ಪೂರ್ಣ ಪ್ರಮಾಣದ ಪ್ರಯೋಗಾಲಯ ಆರಂಭವಾಗಿದ್ದು ಗಂಟಲು ಸ್ರಾವ ಮಾದರಿ ಪರೀಕ್ಷಾ ವರದಿಯನ್ನುಇನ್ಮುಂದೆ ಕೆಲವೇ ಗಂಟೆಗಳಲ್ಲಿ ಪಡೆಯಬಹುದಾಗಿದೆ. ಈವರೆಗೆ ವ್ಯಕ್ತಿಯಲ್ಲಿ ಕೊರೊನಾ ಇದೆಯೋ ಇಲ್ಲವೋ ಎಂದು ದೃಢಪಡಿಸಲು ನಾಲ್ಕೈದು ದಿನ ಕಾಯಬೇಕಿತ್ತು.
ವೆನ್ಲಾಕ್ ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯವು ಸರಕಾರದಿಂದ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಸುಸೂತ್ರ ಕಾರ್ಯಾರಂಭಕ್ಕೆ ಅನುಮತಿ ದೊರಕಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲೂ ಟೆಸ್ಟಿಂಗ್ ಲ್ಯಾಬ್ ತೆರೆಯುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಈ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದಾಗ ಹೇಳಿದ್ದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ವಿದೇಶದಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮತ್ತು ಶಂಕಿತ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಟೆಸ್ಟಿಂಗ್ ಲ್ಯಾಬ್ ಅಗತ್ಯತೆ ಹೆಚ್ಚಿತ್ತು.