ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲೂಕು ಅಧ್ಯಕ್ಷ ಅಬ್ದುಲ್ ಕುಂಞಿ ಪಟ್ಟೆ ಅವರಿಗೆ ವಿದೇಶದಿಂದ ಕೊಲೆ ಬೆದರಿಕೆ – ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು – ಶಾಸಕ ಮಠಂದೂರು, ಬಿಜೆಪಿ ನಾಯಕರಿಂದ ಸೂಕ್ತ ತನಿಖೆಗೆ ಆಗ್ರಹ – ಕಹಳೆ ನ್ಯೂಸ್
ಪುತ್ತೂರು: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುಲ್ ಕುಂಞಿ ಪಟ್ಟೆ ಅವರಿಗೆ ವಿದೇಶದಿಂದ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದು ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಕುಂಞಿಯವರು ದೂರು ನೀಡಿದ್ದು, ಇದನ್ನು ತಿಳಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲು ಆದೇಶಿಸಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ನಗರ ಅಧ್ಯಕ್ಷ,ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತೀಗ್ರವಾಗಿ ಖಂಡಿಸಿದ್ದು, ಸೂಕ್ತ ತನಿಖೆ ಆಗ್ರಹಿಸಿದ್ದಾರೆ.
ಹಿನ್ನಲೆ :
ಎ.6ರಂದು ಸಂಜೆ ಅಬ್ದುಲ್ ಕುಂಞಿಯವರ ಮೊಬೈಲ್‌ಗೆ ವಿದೇಶದಿಂದ ಕರೆ ಬಂದಿದ್ದು ಈ ವೇಳೆ ಅವರು ಕರೆ ಸ್ವೀಕರಿಸಿ ಮಾತನಾಡುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಅಬ್ದುಲ್ ಕುಂಞಿಯವರು ವಿದೇಶದಿಂದ ಬಂದಿರುವ ಮೊಬೈಲ್ ಸಂಖ್ಯೆ 966562361637ನ್ನು ಸಂಪ್ಯ ಪೊಲೀಸ್ ಠಾಣೆಗೆ ನೀಡಿ ದೂರು ನೀಡಿದ್ದಾರೆ.
ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಕೊಲೆ ಬೆದರಿಕೆಯೊಡ್ಡಿದರು-ಅಬ್ದುಲ್ ಕುಂಞಿ
ವಿದೇಶದಿಂದ ಕರೆ ಮಾಡಿದ ಅನಾಮಧೇಯ ವ್ಯಕ್ತಿ ನನ್ನಲ್ಲಿ ಏಕಾಏಕಿ ನನ್ನನ್ನು ನಿಂದಿಸಿ ಬೈಯಲು ಪ್ರಾರಂಭಿಸಿದರು, ಈ ವೇಳೆ ನೀವು ಯಾರು, ಯಾವ ಉದ್ದೇಶಕ್ಕೆ ನನಗೆ ಕರೆ ಮಾಡಿದ್ದೀರಿ, ಸಮಾಧಾನದಿಂದ ಮಾತನಾಡಿ ಎಂದು ನಾನು ಕೇಳಿಕೊಂಡರೂ ಅದನ್ನು ಕೇಳಿಸಿಕೊಳ್ಳಲು ವ್ಯಕ್ತಿ ‘ನಿನ್ನ ಬಗ್ಗೆ ಗೊತ್ತಿದೆ, ನಿನ್ನ ಸರಕಾರ ಈ ಸಂದರ್ಭದಲ್ಲಿ ಜನರಿಗೆ ಏನು ಮಾಡಿದೆ, ರಾಜ್ಯದ ಆರೂವರೆ ಕೋಟಿ ಜನತೆಗೆ ನಿಮ್ಮ ಸರಕಾರದ ಕೊಡುಗೆಯೇನು, ಮೋದಿ ಏನು ಮಾಡುತ್ತಿದ್ದಾರೆ, ಎಂದೆಲ್ಲಾ ಹೇಳಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ, ಮಾತ್ರವಲ್ಲದೇ ನೀನು ಸರಿಯಾಗಿ ಇರಬೇಕು ಇಲ್ಲದಿದ್ದರೆ ನಿನ್ನನ್ನು ಏನು ಮಾಡಬೇಕೆಂದು ಗೊತ್ತಿದೆ ಎಂದು ಕೊಲೆ ಬೆದರಿಕೆ ಒಡ್ಡಿದ್ದಾರೆ, ಈ ಬಗ್ಗೆ ನಾನು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುತ್ತಾರೆಂಬ ವಿಶ್ವಾಸ ನನಗಿದೆ ಎಂದು ಅಬ್ದುಲ್ ಕುಂಞಿ ಪಟ್ಟೆ ತಿಳಿಸಿದ್ದಾರೆ. ಕರೆ ಮಾಡಿರುವ ವ್ಯಕ್ತಿ ಮುಂಡೂರು, ಕುರಿಯ ಭಾಗದ ವ್ಯಕ್ತಿಯಾಗಿರುವ ಸಾಧ್ಯತೆ ಇದೆ ಎಂದು ಅಬ್ದುಲ್ ಕುಂಞಿಯವರು ಅನುಮಾನ ವ್ಯಕ್ತಪಡಿಸಿದ್ದಾರೆ.