Saturday, November 23, 2024
ರಾಜಕೀಯ

ಮುಸ್ಲೀಮರ ಪರ ಬ್ಯಾಟ್ ಬೀಸಿದ ಬಿಎಸ್‌ವೈ ; ” #WeLostHopeBSY ” ಟ್ವಿಟರ್‌ನಲ್ಲಿ ಶುರುವಾಯ್ತು ಪರ – ವಿರೋಧ ಚರ್ಚೆ – ಕಹಳೆ ನ್ಯೂಸ್

ಬೆಂಗಳೂರು (ಏಪ್ರಿಲ್ 07); ಕೊರೋನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೆಲ ಘಟನೆಗಳು ಮತ್ತು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ನಿನ್ನೆ ನೀಡಿದ ಸಂದರ್ಶನವೊಂದು ಇತ್ತೀಚೆಗೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲ ಈ ಕುರಿತು ಬಿಎಸ್‌ವೈ ವಿರುದ್ಧ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು #WeLostHopeBSY ಎಂಬ ಹ್ಯಾಷ್‌ಟ್ಯಾಗ್ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದಿದೆ.

ಘಟನೆ 1: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸಮೂಹಿಕ ಸಮಾರಂಭಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದ ಹೊರತಾಗಿಯೂ ಮುಸ್ಲಿಂ ಸಮುದಾಯ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಮಸೀದಿಯಲ್ಲಿ ಸುಮಾರು 4,000ಕ್ಕೂ ಅಧಿಕ ಜನರನ್ನು ಸೇರಿಸಿ ಸಭೆ ನಡೆಸಿತ್ತು. ಈ ಪೈಕಿ ಕೊರೋನಾ ಸೊಂಕಿಗೆ ಈಗಾಗಲೇ 10 ಮೃತಪಟ್ಟಿದ್ದು ನೂರಾರು ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದ ನಾನಾ ಮೂಲೆಗಳಿಂದ ಜನ ಈ ಸಮಾರಂಭದಲ್ಲಿ ಭಾಗವಹಿಸಿದ್ದು, ಇದೀಗ ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದೇ ಎಲ್ಲಾ ರಾಜ್ಯ ಸರ್ಕಾರಗಳಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ, ಇದರ ಬೆನ್ನಿಗೆ ಮುಸ್ಲಿಂ ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ “ಕೊರೋನಾ ಜಿಹಾದ್” ಎಂಬ ಮಾತುಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ದೊಡ್ಡ ಮಟ್ಟದ ಸದ್ದಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು


ಘಟನೆ-2: ಬೆಂಗಳೂರಿನಲ್ಲಿ ಮುಸ್ಲಿಂ ಜನ ಹೆಚ್ಚು ಇದ್ದ ಸಾಧಿಕ್ ಪಾಳ್ಯಕ್ಕೆ ಕೊರೋನಾ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಇತ್ತೀಚೆಗೆ ಆಶಾ ಕಾರ್ಯಕರ್ತೆಯರು ತೆರಳಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯರು ಸಿಎಎ ಮತ್ತು ಎನ್‌ಆರ್‌ಸಿ ಮಾಹಿತಿ ಪಡೆಯಲು ಬರುತ್ತಿದ್ದಾರೆ ಎಂದು ತಪ್ಪಾಗಿ ತಿಳಿದ ಕೆಲ ಮುಸ್ಲಿಮರು ಆಶಾ ಕಾರ್ಯಕರ್ತೆಯರನ್ನು ದೊಡ್ಡ ದ್ವನಿಯಲ್ಲಿ ಗದರಿಸಿ ಅಲ್ಲಿಂದ ಹೊರ ಹಾಕಿದ್ದರು.

ಆದರೆ, ಮುಸ್ಲಿಂ ಸಮಾಜದವರು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ್ದಾರೆ, ಇವರು ಸಮಾಜ ದ್ರೋಹಿಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಗಿತ್ತು. ಅಲ್ಲದೆ, ಮುಸ್ಲಿಂ ಸಮಾಜದ ಕೆಲವರು ಮಾಡಿದ್ದ ತಪ್ಪಿಗೆ ಇಡೀ ಮುಸ್ಲಿಂ ಸಮಾಜವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹೀಗೆಳೆಯಲಾಗಿತ್ತು.

ಆದರೆ, ನಿನ್ನೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ ಸಮಾಜದವರ ಪರ ಮಾತನಾಡಿದ್ದ ಸಿಎಂ ಯಡಿಯೂರಪ್ಪ, “ಮುಸ್ಲಿಂ ಸಮಾಜದ ಮುಖಂಡರನ್ನು ಕರೆಸಿ ಮಾತನಾಡಲಾಗಿದೆ. ಯಾವುದೋ ಒಂದೆರಡು ಅಹಿತಕರ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯದ ಜನರನ್ನು ಅಪರಾಧಿಗಳು ಎಂಬಂತೆ ಬಿಂಬಿಸುವುದು ತಪ್ಪು. ಮುಸ್ಲಿಮ್ ಬಾಂಧವರ ಕುರಿತು ಯಾರೇ ಮಾತನಾಡಿದರು ಅವರ ವಿರುದ್ಧ ತಕ್ಕ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಕಟು ಎಚ್ಚರಿಕೆ ನೀಡಿದ್ದಾರೆ.

twitter 01

ಟ್ರೆಂಡಿಂಗ್ ಆಗಿರುವ #WeLostHopeBSY

ಸಿಎಂ ವಿರುದ್ಧ ಆರಂಭವಾಯ್ತು ಪರ-ವಿರೋಧ ಚರ್ಚೆ:

ಕೊರೋನಾ ಸೋಂಕು ಸಾಲು ಸಾಲು ಹೆಣಗಳನ್ನು ಬೀಳಿಸುತ್ತಿರುವ ಇಂತಹ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಉಳಿಸುವ ನಿಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಮಾತು ಸಮಾಜದ ಅನೇಕರ ಪ್ರಶಂಶೆಗೆ ಪಾತ್ರವಾಗಿತ್ತು.

ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮುಯ್ಯ, “ಕೊರೊನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು, ಸುಳ್ಳು ಸುದ್ದಿ,ತಿರುಚಿದ ವಿಡಿಯೋ ತುಣುಕುಗಳ ಮೂಲಕ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬಿಎಸ್‌ವೈ ಅವರು ಖಡಕ್ ಎಚ್ಚರಿಕೆ ನೀಡಿರುವುದನ್ನು ನಾನು ಸ್ವಾಗತಿಸಿ ಬೆಂಬಲಿಸುತ್ತೇನೆ. ಅವರು ನುಡಿದಂತೆ ನಡೆಯ ಬೇಕೆಂದು ಆಗ್ರಹಿಸುತ್ತೇನೆ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಆದರೆ, ಬಿಎಸ್‌ವೈ ಅವರ ಈ ಹೇಳಿಕೆಯನ್ನು ಸಮರ್ಥಿಸುವವರಿಗಿಂತ ವಿರೋಧಿಸುವವರ ಸಂಖ್ಯೆ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಳೆದಿದೆ. ನಿನ್ನೆಯಿಂದ ಟ್ವಿಟರ್‌ನಲ್ಲಿ #WeLostHopeBSY ಎಂಬ ಹ್ಯಾಷ್ ಟ್ಯಾಗ್ ಕ್ರಿಯೇಟ್ ಮಾಡಲಾಗಿದ್ದು ಬಿಎಸ್‌ವೈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಲಾಗುತ್ತಿದೆ. ಅಲ್ಲದೆ, ಈ ಹ್ಯಾಷ್‌ಟ್ಯಾಗ್ ಇದೀಗ ಟ್ವಿಟರ್‌ ಟಾಪ್ ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದಿದೆ. ನಮಗೆ ಬಿಜೆಪಿ ಬೇಕು ಆದರೆ, ಬಿಎಸ್ವೈ ಬೇಡ ಎಂಬ ಕರೆಯೂ ಸಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಒಟ್ಟಾರೆ ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೋಮು ಸೌಹಾರ್ದತೆ ಉಳಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮಾಜದ ಪರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಮಟ್ಟದ ವಿರೋಧ ಎದುರಿಸುತ್ತಿರುವುದು ವಿಪರ್ಯಾಸವೇ ಸರಿ. ಅಲ್ಲದೆ, ಈ ರೀತಿ ಯಡಿಯೂರಪ್ಪನವರ ವಿರುದ್ಧ ಮುಖೇಡಿ ಆಂದೋಲನ ಮಾಡುತ್ತಿರುವವರು ಅವರ ಪಕ್ಷದವರೇ ಎಂದೂ ಹೇಳಲಾಗುತ್ತಿದೆ.