ಬೆಂಗಳೂರು: ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ಸಹಾಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ನೆರವಾಗುತ್ತಿದ್ದಾರೆ.
ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ ಮಂಗಳಮುಖಿಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಲ್ಲದೆ ಲಾಕ್‍ಡೌನ್ ಸುಳಿಗೆ ಹಲವು ದಿನಗೂಲಿ ಕಾರ್ಮಿಕರು ಸಹ ಸಿಲುಕಿಕೊಂಡಿದ್ದಾರೆ. ಅಂತಹವರಿಗೆ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.
ಮಂಗಳಮುಖಿಯರು ಹಾಗೂ ಬಡವರನ್ನು ಹುಡುಕಿಕೊಂಡು ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ನಟಿ ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ವಿಶೇಷವಾಗಿ ಮಂಗಳ ಮುಖಿಯರಿಗೆ ರಾಧಿಕಾ, ದಿನಸಿ ಹಂಚಿದ್ದಾರೆ.
ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದು, ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇನ್ನೂ ಕೆಲವರು ನೇರವಾಗಿ ಸಿನಿಮಾ ದಿನಗೂಲಿ ಕಾರ್ಮಿಕರು ಹಾಗೂ ಬಡವರ ಖಾತೆಗೆ ನೇರವಾಗಿ ಹಣ ಹಾಕಿದ್ದಾರೆ. ಇನ್ನೂ ಹಲವರು ಅಗತ್ಯ ಇರುವವರ ಮನೆಗಳಿಗೆ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.