ಮಂಗಳೂರು, ಏ 10 : ರಾಜ್ಯದಲ್ಲಿ ಲಾಕ್ಡೌನ್ ನಡುವೆಯೂ ದಿನೇ ದಿನೇ ಕೊರೊನಾ ಭೀತಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಮಂಗಳೂರು ನಗರವನ್ನು ಸೀಲ್ ಡೌನ್ ಮಾಡಲಾಗಿದೆ ಎಂಬ ವದಂತಿಗಳು ಸೃಷ್ಟಿಯಾಗಿದ್ದು, ಹಲವು ಖಾಸಗಿ ಟಿವಿ ಚಾನೆಲ್ ಗಳು ಕೂಡಾ ಸೀಲ್ ಡೌನ್ ಕುರಿತು ಪ್ರಸಾರ ಮಾಡುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಾಗಲಿ, ಮಂಗಳೂರು ನಗರದಲ್ಲಾಗಲಿ ಯಾವುದೇ ಸೀಲ್ ಡೌನ್ ಪ್ರಕ್ರಿಯೆ ನಡೆದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ನಗರದಲ್ಲಿ ಸೀಲ್ ಡೌನ್ ಮಾಡಲಾಗಿದೆ ಎಂಬುದು ನಿರಾಧಾರ ಸುದ್ದಿ ಆಗಿದೆ. ಈಗಾಗಲೇ ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಪ್ರಕ್ರಿಯೆ ಜಾರಿಯಲ್ಲಿದೆ. ಇದನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ವದಂತಿ, ಅಧಾರ ರಹಿತ ಸುದ್ದಿಗಳ ಪ್ರಸಾರದಿಂದ ಸಾರ್ವಜನಿಕರಲ್ಲಿ ಆತಂಕ, ಗೊಂದಲ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಲಾಕ್ ಡೌನ್ ಮಾತ್ರ ಜಾರಿಯಲ್ಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ರಾಜ್ಯದ ಹಲವು ಟಿವಿ ಮಾಧ್ಯಮಗಳಲ್ಲಿ ಶುಕ್ರವಾರದಿಂದ ನಗರದ ಬಂಟ್ಸ್ ಹಾಸ್ಟೆಲ್ ಮುಂತಾದೆಡೆ ಸೀಲ್ ಡೌನ್ ಮಾಡಲಾಗಿದೆ ಎಂಬ ವರದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.