ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿಗೆ 40 ಸಾವು, 1035 ಹೊಸ ಕೇಸುಗಳು ; ಭಾರತದಲ್ಲಿ 7447 ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ – ಕಹಳೆ ನ್ಯೂಸ್
ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 40 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 1035 ಹೊಸ ಪ್ರಕರಣಗಳು ವರದಿಯಾಗಿದೆ. ಇದು ಭಾರತದಲ್ಲಿ ಸೋಂಕು ಕಾಣಿಸಿಕೊಂಡ ನಂತರ ನಿನ್ನೆ ಕಂಡುಬಂದ ಅತಿಹೆಚ್ಚು ಪ್ರಕರಣವಾಗಿದೆ.
ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 7447ಕ್ಕೇರಿದ್ದು ಅವರಲ್ಲಿ 6 ಸಾವಿರದ 565 ಸೋಂಕಿತರು, 643 ಮಂದಿ ಗುಣಮುಖ ಹೊಂದಿದವರು ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರು ಮತ್ತು ಇನ್ನು ಕೆಲವರು ವಲಸೆ ಹೋದವರು ಹಾಗೂ 239 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶ ಹೇಳುತ್ತದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು 110 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ಸಾವಿರದ 574 ಸೋಂಕಿತರಿದ್ದು 188 ಮಂದಿ ಗುಣಮುಖರಾಗಿದ್ದಾರೆ. ನಂತರದ ಸ್ಥಾನ ತಮಿಳು ನಾಡಿನಲ್ಲಿ 911 ಸೋಂಕಿತರಿದ್ದಾರೆ. ದೆಹಲಿಯಲ್ಲಿ 903 ಸೋಂಕಿತರಿದ್ದು 25 ಮಂದಿ ಗುಣಮುಖರಾಗಿ 13 ಮಂದಿ ಮೃತಪಟ್ಟಿದ್ದಾರೆ.
ರಾಜಸ್ತಾನದಲ್ಲಿ 553 ಮಂದಿ ಸೋಂಕಿತರಿದ್ದು ತೆಲಂಗಾಣದಲ್ಲಿ 473, ಛತ್ತೀಸ್ ಗಢ ಮತ್ತು ಚಂಡೀಗಢಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ, ಹರ್ಯಾಣಗಳಲ್ಲಿ ಕ್ರಮವಾಗಿ 431 ಮತ್ತು 177 ಸೋಂಕಿತರಿದ್ದಾರೆ. ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿದ್ದ ಕೇರಳದಲ್ಲಿ ಈಗ 364 ಸೋಂಕಿತರಿದ್ದಾರೆ. ಲಡಾಕ್, ಜಮ್ಮು-ಕಾಶ್ಮೀರಗಳಲ್ಲಿ ಕ್ರಮವಾಗಿ 15 ಮತ್ತು 207 ಸೋಂಕಿತರಿದ್ದಾರೆ. ಈಶಾನ್ಯ ಭಾಗಗಳಲ್ಲಿ ಸಂಖ್ಯೆ ಕಡಿಮೆಯಾಗಿದೆ.
ಅರುಣಾಚಲ ಪ್ರದೇಶ, ಮಿಜೊರಂ, ತ್ರಿಪುರಾಗಳಲ್ಲಿ ಒಂದೇ ಒಂದು ಕೊರೋನಾ ಕೇಸುಗಳಿವೆ.ಅಸ್ಸಾಂ ರಾಜ್ಯದಲ್ಲಿ 29 ಮಂದಿ ಸೋಂಕಿತರಿದ್ದಾರೆ.ಜಾರ್ಖಂಡ್ ನಲ್ಲಿ 3 ಹೊಸ ಕೇಸುಗಳು ಪತ್ತೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 17ಕ್ಕೇರಿದೆ.ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ 5 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಬಿಹಾರದಲ್ಲಿ ಸೋಂಕಿತ 60 ವ್ಯಕ್ತಿಗಳಲ್ಲಿ 23 ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಭಾರತದಲ್ಲಿ ಒಡಿಶಾ ನಂತರ ಇದೀಗ ಪಂಜಾಬ್ ಸರ್ಕಾರ ಲಾಕ್ ಡೌನ್ ನ್ನು ಮೇ 1ರವರೆಗೆ ವಿಸ್ತರಿಸಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯ ಹಂತಕ್ಕೆ ತಲುಪಲು ಆರಂಭವಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಮರಿಂದರ್ ನೇತೃತ್ವದ ಸರ್ಕಾರ ಈ ಕ್ರಮ ಕೈಗೊಂಡಿದೆ.
ಆದರೆ ಆರೋಗ್ಯ ಸಚಿವಾಲಯ ಹೇಳುವ ಪ್ರಕಾರ ದೇಶದಲ್ಲಿ ಕೊರೋನಾ ಸೋಂಕು ಇನ್ನೂ ಮೂರನೇ ಹಂತ ತಲುಪಿಲ್ಲ.
Source : ANI