ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ವಿಡಿಯೊ ಕಾನ್ಫೆರೆನ್ಸ್ ; ಲಾಕ್ ಡೌನ್ ವಿಸ್ತರಿಸಲು ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಬೆಂಬಲ – ಕಹಳೆ ನ್ಯೂಸ್
ಹೊಸದಿಲ್ಲಿ, ಎ.11: ಭಾರತದಲ್ಲಿ ಮಹಾಮಾರಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಎ.14ರ ತನಕ ಜಾರಿಸಲಾಗಿರುವ ಲಾಕ್ ಡೌನ್ ನ್ನು ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಇದೇ ಮೊದಲ ಬಾರಿ ಮಾಸ್ಕ್ ಧರಿಸಿ ಸಭೆ ನಡೆಸುತ್ತಿರುವ ಪ್ರಧಾನಿ ಮೂರು ವಾರಗಳ ಲಾಕ್‌ಡೌನ್ ಮಂಗಳವಾರ ಕೊನೆಗೊಳಿಸಬೇಕೆ ಅಥವಾ ಮುಂದುವರಿಸಬೇಕೆ ಎಂಬ ಬಗ್ಗೆ ಅವರು ಮುಖ್ಯಮಂತ್ರಿಗಳಿಂದ ಅಭಿಪ್ರಾಯ ಪಡೆಯುತ್ತಿದ್ದಾರೆ.
ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ತಾನು ದಿನದ 24 ಗಂಟೆಯೂ ನಿಮಗೆ ಲಭ್ಯವಿರುತ್ತೇನೆ ಎಂದು ಪ್ರಧಾನಿ ಮೋದಿ ವಿವಿಧ ರಾಜ್ಯಗಳ ಸಿಎಂಗಳಿಗೆ ತಿಳಿಸಿದರು. ಸಂಜೆ ಮೂರು ಗಂಟೆಯ ತನಕ ಸಭೆ ಮುಂದುವರಿಯುವ ಸಾಧ್ಯತೆ ಇದೆ.
ಮೋದಿ ತೀರ್ಮಾನಕ್ಕೂ ಮುನ್ನ ಒಡಿಶಾ ,ಪಂಜಾಬ್ , ರಾಜಸ್ಥಾನ ಲಾಕ್ ಡೌನ್ ವಿಸ್ತರಣೆಯನ್ನು ಘೋಷಿಸಿವೆ. ಒಡಿಶಾ ಮತ್ತು ರಾಜಸ್ಥಾನದಲ್ಲಿ ಎಪ್ರಿಲ್ 30ರ ತನಕ ಮತ್ತು ಪಂಜಾಬ್ ನಲ್ಲಿ ಮೇ 1ರ ತನಕ ಲಾಕ್ ಡೌನ್ ಮುಂದುವರಿಯಲಿದೆ. ಲಾಕ್ ಡೌನ್ ವಿಸ್ತರಿಸಲು ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ
ಬಿಹಾರದ ಸರ್ಕಾರ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಲಾಕ್ ಡೌನ್ ನ್ನು ವಿಸ್ತರಿಸಲು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ; ಆದಾಗ್ಯೂ, ಪ್ರವಾಹದಿಂದ ಕಳೆದ ವರ್ಷ ತೊಂದರೆಗೊಳಗಾಗಿದ್ದ ಬಿಹಾರದಲ್ಲಿ ಪರಿಹಾರ ಕಾರ್ಯಗಳನ್ನು ಮುಂದುವರಿಸಲು ಲಾಕ್ ಡೌನ್ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಕಳೆದ ವರ್ಷ ಕಾಣಿಸಿಕೊಂಡ ಭಾರಿ ಪ್ರವಾಹದಿಂದಾಗಿ ಅಪಾರ ನಷ್ಟವನ್ನುಂಟು ಮಾಡಿತ್ತು. ಬಿಹಾರದಲ್ಲಿ ಪರಿಹಾರ ಯೋಜನೆಗಳು ಮುಂದುವರಿದಿದೆ.
ಇದೇ ವೇಳೆ ಕೇಂದ್ರ ಸರಕಾರ ಮೀನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಿದೆ.