ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಬೆಳವಣಿಗೆ ; 12 ಮಂದಿ ಕೊರೊನಾ ಸೋಂಕಿತರ ಪೈಕಿ 7 ಮಂದಿ ಗುಣಮುಖ, ಒಂದು ವಾರದಿಂದ ‘ ನೋ ಪಾಸಿಟಿವ್ ‘ – ಕಹಳೆ ನ್ಯೂಸ್
ಮಂಗಳೂರು: ಕೊರೋನ ಸೋಂಕಿಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ 70 ವರ್ಷ ಪ್ರಾಯದ ವೃದ್ಧೆ ಸಂಪೂರ್ಣ ಗುಣಮುಖರಾಗಿದ್ದು, ನಿನ್ನೆ (ಎಪ್ರಿಲ್ 12) ಸಂಜೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ.
ಇದರೊಂದಿಗೆ 12 ಮಂದಿ ಸೋಂಕಿತರ ಪೈಕಿ 7 ಮಂದಿಯನ್ನು ಬಿಡುಗಡೆಗೊಳಿಸಿದಂತಾಗಿದೆ. ಗುಣಮುಖರಾದ ಎಲ್ಲರೂ 28 ದಿನಗಳ ಹೋಂ ಕ್ವಾರಂಟೈನ್ ನಲ್ಲಿರಬೇಕೆಂದು ಸೂಚಿಸಲಾಗಿದೆ.
ಮಾ. 9ರಂದು ಸೌದಿ ಅರೇಬಿಯಾದಿಂದ ಕಲ್ಲಿಕೋಟೆಗೆ ಆಗಮಿಸಿದ್ದ ಸುಮಾರು 70 ವರ್ಷದ ಈ ವೃದ್ಧೆ ಮಾ.19ರಂದು ಮಂಗಳೂರಿಗೆ ಚಿಕಿತ್ಸೆಗಾಗಿ ಆಗಮಿಸಿದ್ದರು.
ಇವರಲ್ಲಿ ಕೊರೋನ ರೋಗದ ಲಕ್ಷಣ ಕಂಡು ಬಂದ ಕಾರಣ ಇವರ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಮಾ.24ರಂದು ಬಂದ ಇವರ ವರದಿಯಲ್ಲಿ ಪಾಸಿಟಿವ್ ಕಂಡು ಬಂದಿತ್ತು. ಹಾಗೇ ಇವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಎ.7 ಮತ್ತು 8 ರಂದು ಪ್ರಯೋಗಾಲಯದಿಂದ ಬಂದ ಇವರ ಗಂಟಲಿನ ದ್ರವದ ವರದಿಯಲ್ಲಿ ನೆಗೆಟಿವ್ ಕಂಡು ಬಂತು. ಅದರಂತೆ ಸಂಪೂರ್ಣ ಗುಣಮುಖರಾದ ಇವರನ್ನು ಬಿಡುಗಡೆಗೊಳಿಸಲಾಗಿದೆ.
ಕೊರೊನಾ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಮೂಲದ ಮೂವರು ಮತ್ತು ಭಟ್ಕಳದ ಯುವಕ ಸಹಿತ ನಾಲ್ಕು ಮಂದಿಯನ್ನು ಎ.6ರಂದು ಬಿಡುಗಡೆಗೊಳಿಸಲಾಗಿತ್ತು.
ಎ.10ರಂದು ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21ರ ಹರೆಯದ ಯುವಕನನ್ನು ಮತ್ತು ಎ.11ರಂದು ಖಾಸಗಿ ಆಸ್ಪತ್ರೆಯಲ್ಲಿದ್ದ 10 ತಿಂಗಳ ಮಗುವನ್ನು ಬಿಡುಗಡೆಗೊಳಿಸಲಾಗಿತ್ತು.
ರವಿವಾರ 70ರ ಹರೆಯದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೂ 5 ಮಂದಿ ಚೇತರಿಸುತ್ತಿದ್ದು, ಅವರೆಲ್ಲರೂ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.