Thursday, January 23, 2025
ಸುದ್ದಿ

ಕೊರೊನಾ ಕಟ್ಟುನಿಟ್ಟಿನ ಕ್ರಮ ; ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರ ಪ್ರಶಂಸೆ – ಕಹಳೆ ನ್ಯೂಸ್

ಉಡುಪಿ: ಮಹಾಮಾರಿ ಕೊರೊನಾ ವೈರಸ್‍ಗೆ ಕಡಿವಾಣ ಹಾಕಿರುವ ಉಡುಪಿ ಜಿಲ್ಲೆಗೆ ಕೇಂದ್ರ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ಕಳೆದ 2 ವಾರಗಳಿಂದ ಯಾವುದೇ ಸೋಂಕಿತರು ಕಂಡುಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 29ರಂದು ಕೊನೆಯದಾಗಿ ಕೊರೊನಾ ಸೋಂಕಿತರೊಬ್ಬರು ಪತ್ತೆಯಾಗಿದ್ದರು. ಅದಾದ ಬಳಿಕ ಜಿಲ್ಲಾಡಳಿತ ಕೈಗೊಂಡ ಸಮರ್ಥ ನಿರ್ಧಾರಗಳಿಂದ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಂಡು ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದ ಕೂಡಲೇ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಜೊತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಕಾರಣ ಸೋಂಕು ಹರಡುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದು ಕೇಂದ್ರ ಪ್ರಶಂಸಿದೆ. ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದು, ಸರಕು ಸಾಗಾಣಿಕೆ ಮತ್ತು ತುರ್ತು ವೈದ್ಯಕೀಯ ಕಾರಣ ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಜಿಲ್ಲೆಯೊಳಗೆ ಪ್ರವೇಶ ನೀಡಿಲ್ಲ ಎಂದು ಡಿಸಿ ತಿಳಿಸಿದರು.

ಹೊರ ಜಿಲ್ಲೆಗಳಿಂದ ಸಹ ಸೋಂಕು ಹರಡುವುದನ್ನು ತಪ್ಪಿಸಲಾಗಿದೆ. ಜಿಲ್ಲೆಯೊಳಗೆ ದಿನನಿತ್ಯದ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಸಮಯ ನಿಗಧಿಪಡಿಸಲಾಗಿದ್ದು, ಖರೀದಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಅನಗತ್ಯ ವಾಹನ ಸಂಚಾರ ನಿಭಂಧಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿನ ಕಾರ್ಮಿಕರಿಗೆ, ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು, ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.

ಖಡಕ್ ರೂಲ್ಸ್:
ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ವಿಸ್ತರಿಸಿದ್ದೇ ತಡ ಉಡುಪಿಯಲ್ಲಿ ಚೆಕ್ ಪೋಸ್ಟನ್ನು ಪೊಲೀಸರು ಫುಲ್ ಟೈಟ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ. ಬೆಳಗ್ಗೆ 11ರ ನಂತರ ಓಡಾಡುವ ಎಲ್ಲಾ ವಾಹನವನ್ನು ಬಿಡದೆ ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ಕಾರಣ ಕೇಳಿ, ವಿನಾಯಿತಿ ನಿಯಮಕ್ಕೆ ಅನ್ವಯವಾಗದಿದ್ದರೆ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವ ಬೈಕ್, ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಣಿಪಾಲ ಉಡುಪಿಯಲ್ಲಿ 10ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ, 247 ಮೆಡಿಕಲ್‍ಗಳು, ಫಾರ್ಮಸಿ ಇರೋದ್ರಿಂದ ಈ ನಗರಗಳ ನಡುವೆ ಸ್ವಲ್ಪ ಸಾರ್ವಜನಿಕರ ಓಡಾಟ ಇದೆ.

ಮಂಗಳವಾರ ಒಂದೇ ದಿನ 20 ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ಪೊಲೀಸರು ದಾಖಲು ಮಾಡಕೊಂಡಿದ್ದಾರೆ. ಈ ನಡುವೆ ಹೊರ ಜಿಲ್ಲೆಗಳಿಗೆ ಹೋಗಲು ಜನ ಪೊಲೀಸ್ ಪಾಸ್‍ಗೆ ಒತ್ತಾಯ ಮಾಡುತ್ತಿದ್ದಾರೆ. ಆರೋಗ್ಯದ ವಿಚಾರ ಬಿಟ್ಟು ಬೇರೆ ಯಾವ ವಿಚಾರಕ್ಕೂ ಪಾಸ್ ಕೊಡಲ್ಲ ಅಂತ ಎಸ್ ಪಿ. ವಿಷ್ಣುವರ್ಧನ್ ಹೇಳಿದ್ದಾರೆ.