ನಿಖಿಲ್ ಹಾಗೂ ರೇವತಿ ವಿವಾಹ : ಲಾಕ್ ಡೌನ್ ನಿಯಮ ಉಲ್ಲಂಘನೆಯಾದರೆ ಕ್ರಮ ; ಎಚ್ಚರಿಕೆ ನೀಡಿದ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ – ಕಹಳೆ ನ್ಯೂಸ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವಿವಾಹ ಮಹೋತ್ಸವದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
ರಾಮನಗರ ತಾಲೂಕಿನ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಶುಕ್ರವಾರ ವಿವಾಹ ನಿಗದಿಯಾಗಿದೆ. ಆದರೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವಂತಹ ಕಾರ್ಯಕ್ರಮಗಳಿಗೆ ಸರ್ಕಾರ ನಿರ್ಬಂಧಿಸಿದೆ ವಿವಾಹಗಳು ನಡೆದರೂ ಹೆಚ್ಚು ಜನ ಸೇರದಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಆದೇಶ ಹೊರಡಿಸಿದೆ.
ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯಕ್ರಮವನ್ನು ಚಿತ್ರೀಕರಿಸಿ ದಾಖಲೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘನೆಯಾದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅಶ್ವತ್ ನಾರಾಯಣ ಹೇಳಿದ್ದಾರೆ.
ಈ ಹಿಂದೆ ರಾಮನಗರದ ಜಾನಪದ ಲೋಕದ ಬಳಿ ವಿವಾಹ ನಡೆಸಲು ನಿಶ್ಚಯಲಾಗಿತ್ತು. ಆದರೆ ಕೊರೊನಾ ಭೀತಿ, ಲಾಕ್‌ಡೌನ್ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಸರಳ ರೀತಿಯಲ್ಲಿ ಮದುವೆ ಮಾಡಲು ನಿಶ್ಚಿಯಿಸಲಾಗಿತ್ತು. ಆದರೆ ಬೆಂಗಳೂರು ಈಗ ಕೊರೋನಾ ರೆಡ್ ಝೋನ್ ನಲ್ಲಿದ್ದು, ಕೇತಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಸರಳವಾಗಿ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಕುಟುಂಬದ ಆಪ್ತರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಮ್ಮುಖದಲ್ಲೇ ಆರತಕ್ಷತೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.