ಉಡುಪಿ: ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜಾಸ್ತಿಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದಲ್ಲಿ ಆಹಾರ ವಸ್ತುಗಳ ಲಭ್ಯತೆ ಕಷ್ಟವಾಗಲಿದೆ ಎಂದು ಉಡುಪಿ ಅದಮಾರು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶಕ್ಕೋಸ್ಕರ, ಭಾರತದಲ್ಲಿ ಜೀವಿಸುವ ಮನುಷ್ಯರಿಗೋಸ್ಕರ ನಾವು ತ್ಯಾಗ ಮಾಡಲು ಇದು ಸೂಕ್ತ ಸಮಯ. ಹಾಗಾಗಿ ನಾವು ವಾರದಲ್ಲಿ ಮೂರು ಹೊತ್ತು ಉಪವಾಸ ಮಾಡೋಣ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಸ್ವಾಮೀಜಿ ಕರೆ ನೀಡಿದ್ದಾರೆ. ವಾರಕ್ಕೆ ಮೂರು ಹೊತ್ತು ಆಹಾರವನ್ನು ತ್ಯಾಗ ಮಾಡಿದರೆ ದೇಶದಲ್ಲಿ ಆಹಾರ ವಸ್ತುಗಳನ್ನು ಉಳಿಸಿದಂತಾಗುತ್ತದೆ ಎಂದಿದ್ದಾರೆ.
ಸಾಧ್ಯವಾದರೆ ವಾರಕ್ಕೊಂದು ಉಪವಾಸ ಮಾಡಲೂಬಹುದು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ಕಿಂಚಿತ್ತು ತ್ಯಾಗ ಮಾಡಿದರೆ ದೇಶದ ಭವಿಷ್ಯಕ್ಕೆ ಒಳಿತು ಎಂದು ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಉಪವಾಸದ ಸಂಕಲ್ಪ ಮಾಡಿದರೆ ಸರ್ಕಾರದ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ. ಮುಂದಿನ ಕಷ್ಟದ ದಿನಗಳಿಗೆ ಈಗಿನಿಂದಲೇ ಸಿದ್ಧತೆ ಮಾಡಿದಂತಾಗುತ್ತದೆ ಎಂಬುದು ಪರ್ಯಾಯ ಸ್ವಾಮೀಜಿಗಳ ಅಭಿಪ್ರಾಯವಾಗಿದೆ.