Recent Posts

Tuesday, November 19, 2024
ರಾಜಕೀಯಸುದ್ದಿ

” ತನಗೊಂದು ನ್ಯಾಯ ಸಾಮಾನ್ಯ ಜನತೆಗೊಂದು ನ್ಯಾಯ..! ” ಇದೇನಯ್ಯಾ ಕುಮಾರಾ‌…? ನಿನ್ನ ಕುಮಾರನ ಕಲ್ಯಾಣ – ರಾಮನಗರದಲ್ಲಿ ನಿಖಿಲ್-ರೇವತಿ ಅದ್ದೂರಿ ವಿವಾಹ ; ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಆರೋಪ – ಕಹಳೆ ನ್ಯೂಸ್

ರಾಮನಗರ/ಬಿಡದಿ: ಕರೊನಾ ಆತಂಕದ ನಡುವೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.

ರಾಮನಗರ ಕ್ಷೇತ್ರದ ಜನತೆ ಸಮ್ಮುಖದಲ್ಲಿಯೇ ಪುತ್ರನ ವಿವಾಹ ಮಾಡಬೇಕು ಎನ್ನುವ ಎಚ್‌ಡಿಕೆ ದಂಪತಿ ಕನಸು ಈಡೇರಿಲ್ಲವಾದರೂ, ನಿಖಿಲ್ ಮತ್ತು ರೇವತಿ ಕಲ್ಯಾಣ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಬಿಡದಿಯ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ 9.25ರಿಂದ 10.20ರ ಮುಹೂರ್ತದಲ್ಲಿ ನಾದಸ್ವರ ಹಿಮ್ಮೇಳದೊಂದಿಗೆ ಅಜ್ಜಿ ಚನ್ನಮ್ಮ ಮತ್ತು ತಾತ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ರೇವತಿ ಕೊರಳಿಗೆ ನಿಖಿಲ್ ತಾಳಿ ಕಟ್ಟಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಸಚಿವ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎ.ಮಂಜುನಾಥ್, ಎಚ್.ಕೆ. ಬಾಲಕೃಷ್ಣ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಮಂಜುನಾಥ್ ದಂಪತಿ, ವಧು ರೇವತಿ ತಂದೆ ಮಂಜುನಾಥ್, ತಾಯಿ ಶ್ರೀದೇವಿ, ದೊಡ್ಡಪ್ಪ ಹಾಗೂ ಮಾಜಿ ಸಚಿವ ಎಂ.ಕೃಷ್ಣಪ್ಪ ಸೇರಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.

ಸಾಮಾಜಿಕ ಅಂತರ ಮರೀಚಿಕೆ:
ಕರೊನಾ ಹಿನ್ನೆಲೆಯಲ್ಲಿ ರಾಮನಗರದಿಂದ ಬೆಂಗಳೂರಿಗೆ ಶ್‌ಟಿ ಆಗಿದ್ದ ನಿಖಿಲ್-ರೇವತಿ ಕಲ್ಯಾಣ ಮತ್ತೆ ಬಿಡದಿಯ ತೋಟದ ಮನೆಗೆ ಸ್ಥಳಾಂತರಗೊಂಡಿತ್ತು. ಆದರೆ, ಕುಟುಂಬ ಸದಸ್ಯರೂ ಸೇರಿ 20-30 ಮಂದಿಯ ಸಮ್ಮುಖದಲ್ಲಷ್ಟೇ ಮದುವೆ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದ ದಂಪತಿ, ಮಾತು ಮುರಿದಿದ್ದಾರೆ. ಮಾಹಿತಿ ಪ್ರಕಾರ ಸುಮಾರು 200 ಮಂದಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಮದುವೆಯಲ್ಲಿ ಪಾಲ್ಗೊಂಡಿದ್ದ ಆಮಂತ್ರಿತರು, ಕುಟುಂಬ ಸದಸ್ಯರೂ ಸೇರಿ ಯಾರೂ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ ಎನ್ನುವುದಕ್ಕೆ ಲಭ್ಯ ವಿಡಿಯೋಗಳೇ ಸಾಕ್ಷಿ ಒದಗಿಸಿವೆ. ಪ್ರಸ್ತುತ ಸನ್ನಿವೇಶದಲ್ಲಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಎಚ್‌ಡಿಕೆ ಕುಟುಂಬ, ಪುತ್ರನ ಮದುವೆ ಮೂಲಕ ಸಾಮಾಜಿಕ ಜವಾಬ್ದಾರಿ ಮರೆಯಿತೆ ಎನ್ನುವ ಪ್ರಶ್ನೆ ಮೂಡಿಸಿದೆ.

ಬಂದಿದ್ದು ಹೆಚ್ಚು ಕಾರು:
ಮದುವೆಯಲ್ಲಿ ಪಾಲ್ಗೊಳ್ಳಲು 48 ವಾಹನಗಳಿಗೆ ಅನುಮತಿ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ಇದರ ಹೊರತಾಗಿಯೂ ಹೆಚ್ಚು ಸಂಖ್ಯೆಯಲ್ಲಿ ವಾಹನಗಳು ಮದುವೆ ಮನೆ ಪ್ರವೇಶ ಮಾಡಿದ್ದವು ಎಂದು ತಿಳಿದುಬಂದಿದೆ. ಅಲ್ಲದೆ, ಮದುವೆ ನಡೆಯುತ್ತಿದ್ದ ತೋಟಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಪ್ರವೇಶ ಪಡೆದಿದ್ದ ವಾಹನಗಳು, ವಾಪಸಾಗುವಾಗ ಮಾತ್ರ ಮತ್ತೊಂದು ದಾರಿಯ ಮೂಲಕ ತೆರಳಿದ್ದು ಅನುಮಾನಗಳಿಗೆ ಕಾರಣವಾಗಿದೆ.

ಅದ್ದೂರಿತನ:
ಮದುವೆ ಎಚ್‌ಡಿಕೆ ಕುಟುಂಬಕ್ಕೆ ಸರಳವಾಗಿ ಕಂಡರೂ, ಅಲ್ಲಿ ನಡೆದಿದ್ದ ಸಿದ್ಧತೆಗಳು ಮಾತ್ರ ಅದ್ದೂರಿತನವನ್ನು ಸಾರಿ ಹೇಳುತ್ತಿದ್ದವು. ಮಂಟಪವೂ ಸೇರಿ ಇಡೀ ಮದುವೆ ಮನೆ ಹೂವು, ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಪ್ರತಿ ಹೆಜ್ಜೆಯಲ್ಲಿಯೂ ಅದ್ದೂರಿತನ ಎದ್ದು ಕಾಣುತ್ತಿತ್ತು. ಇನ್ನು ಸಾಮಾನ್ಯರ ಮದುವೆಗೆ ಹಲವಾರು ನಿಬಂಧನೆಗಳನ್ನು ಹೇರಿರುವ ಸರ್ಕಾರಕ್ಕೆ, 200ಕ್ಕೂ ಹೆಚ್ಚು ಜನರಿಂದ ತುಂಬಿದ್ದ ನಿಖಿಲ್-ರೇವತಿ ಮದುವೆ ಕಾಣಲಿಲ್ಲವೇ ಎನ್ನುವ ಪ್ರಶ್ನೆಯೂ ಮೂಡಿದೆ.

ಎಲ್ಲೆಡೆ ಚೆಕ್ ಪೋಸ್ಟ್:
ಮದುವೆ ಹಿನ್ನೆಲೆಯಲ್ಲಿ ಎಚ್‌ಡಿಕೆ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಮದುವೆಯಲ್ಲಿ ಪಾಲ್ಗೊಳ್ಳಬಹುದು ಎನ್ನುವ ಕಾರಣಕ್ಕೆ ಮದುವೆ ಮನೆಯ ಸುತ್ತಮುತ್ತ ಸುಮಾರು 5 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ರಾಮನಗರ, ಕನಕಪುರ, ಹಾರೋಹಳ್ಳಿ, ಮಾಗಡಿ, ಬೆಂಗಳೂರು ಸೇರಿ ಯಾವುದೇ ಕಡೆಯಿಂದಲೂ ನಿಖಿಲ್ ಮದುವೆಗೆ ಆಮಂತ್ರಿತರ ಹೊರತಾಗಿ ಬೇರೆ ಯಾರೂ ಬರಬಾರದು ಎನ್ನುವ ಕಾರಣಕ್ಕೆ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿತ್ತು. ಸಾಮಾನ್ಯ ದಿನಗಳಲ್ಲಿ ಪಾಸ್ ಇದ್ದ ಎಲ್ಲ ವಾಹನಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಓಡಾಡಲು ಅವಕಾಶವಿದ್ದರೂ ಶುಕ್ರವಾರ ನಿಖಿಲ್ ಮದುವೆ ಮುಗಿಯುವವರೆಗೂ ಸಂಚಾರ ದುಸ್ತರವಾಗಿತ್ತು.