Wednesday, November 20, 2024
ಸುದ್ದಿ

ಕೊರೋನಾ ವಿರುದ್ಧ ಹೋರಾಟಕ್ಕಾಗಿ ತನ್ನ ಮದುವೆ ಮುಂದೂಡಿದ ಮಳವಳ್ಳಿ ಡಿವೈಎಸ್ಪಿ ಎಂ.ಜೆ.ಪೃಥ್ವಿ – ಕಹಳೆ ನ್ಯೂಸ್

ಮಂಡ್ಯ‌(ಏ.18): ಕೊರೋನಾ ಆತಂಕ ಹೆಚ್ಚಾದ ಹಿನ್ನೆಲೆ, ದೇಶಾದ್ಯಂತ ಲಾಕ್​ಡೌನ್ ಜಾರಿಯಾಗಿದೆ. ಮಹಾಮಾರಿ ಕೊರೋನಾಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಲಾಕ್​ಡೌನ್ ನಡುವೆ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ವಿವಿಧ ವರ್ಗಗಳ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಹಗಲಿರುಳು ಎನ್ನದೆ ಕುಟುಂಬಸ್ಥರಿಂದ ದೂರ ಉಳಿದು ದೇಶದ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಡ್ಯದಲ್ಲಿ ದಕ್ಷ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿ ಮಾದರಿಯಾಗಿದ್ದಾರೆ.

ಹೌದು, ಮಳವಳ್ಳಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಜೆ.ಪೃಥ್ವಿ ತಮ್ಮ ಮದುವೆಯನ್ನು ಮುಂದೂಡಿರುವ ದಕ್ಷ ಅಧಿಕಾರಿ. ಮಳವಳ್ಳಿಯಲ್ಲಿ ಕೊರೋನಾ ಸೋಂಕಿತರ ಹೆಚ್ಚಾಗಿದ್ದು, ಪೃಥ್ವಿ ಅವರು ಎದೆಗುಂದದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್​ ಕರ್ತವ್ಯ ನಿರ್ವಹಿಸಲು ಇದೇ ತಿಂಗಳು 5ನೇ ತಾರೀಖಿನಂದು ನಿಗದಿಯಾಗಿದ್ದ ಮದುವೆಯನ್ನು ಮುಂದಕ್ಕೆ ಹಾಕಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆ ಮುಂದೂಡಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಅಧಿಕಾರಿಯ ಕಾರ್ಯಕ್ಕೆ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಜೆ.ಪೃಥ್ವಿ ಅವರು ಏಪ್ರಿಲ್​ 5ರಂದು ಹಸೆಮಣೆ ಏರಬೇಕಿತ್ತು. ಆದರೆ ಕೊರೋನಾ ತಡೆಗಟ್ಟಲು ಲಾಕ್​ಡೌನ್​ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಇಂತಹ ಧೈರ್ಯವಂತ, ದಕ್ಷ, ಪ್ರಾಮಾಣಿಕ, ಮಾದರಿ ಮಹಿಳಾ ಅಧಿಕಾರಿ ಮಂಡ್ಯ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ” ಎಂದು ಸುಮಲತಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಳವಳ್ಳಿ ಕೊರೋನಾ ಹಾಟ್​ ಸ್ಪಾಟ್​ ಆಗಿದ್ದು, ಈವರೆಗೆ 10 ಪ್ರಕರಣಗಳು ಪತ್ತೆಯಾಗಿವೆ. ದೆಹಲಿ ತಬ್ಲಿಘೀ ಜಮಾತ್​ ಸಭೆಯಲ್ಲಿ ಭಾಗಿಯಾಗಿದ್ದ ಧರ್ಮಾಧಿಕಾರಿಗಳ ಸಂಪರ್ಕದಲ್ಲಿದ್ದವರಿಗೆ ಕೊರೋನಾ ಸೋಂಕು ತಗುಲಿದೆ. ಮೊದಲು 3 ಪ್ರಕರಣಗಳು ಬೆಳಕಿಗೆ ಬಂದವು. ಈವರೆಗೆ 10 ಕೊರೋನಾ ಕೇಸ್​​ಗಳ ದೃಢಪಟ್ಟಿವೆ. ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹ ವೇಳೆಯಲ್ಲಿ ಮಹಿಳಾ ಅಧಿಕಾರಿ ಪೃಥ್ವಿ ಎದೆಗುಂದದೆ ಕರ್ತವ್ಯ ನಿರ್ವಹಿದುತ್ತಿದ್ದಾರೆ. ದಕ್ಷ ಮಹಿಳಾ ಅಧಿಕಾರಿ ಕರ್ತವ್ಯ ನಿಷ್ಟೆಗೆ ಸಾರ್ವಜನಿಕರೂ ಸಹ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.