ಪೇಜಾವರ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ- ಕಹಳೆ ನ್ಯೂಸ್
ಸ್ಥಗಿತವಾದ ಪರೀಕ್ಷೆಗಳ ಬಗ್ಗೆ ಸಚಿವರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ಈ ನಡುವೆ ಪೇಜಾವರ ಮಠ ನಿರಾತಂಕವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖುದ್ದಾಗಿ ವಾಟ್ಸಪ್‍ನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಸ್ವಾಮೀಜಿ ಮತ್ತು ಪ್ರಾಚಾರ್ಯರು 400 ವಿದ್ಯಾರ್ಥಿಗಳಿಗೆ ಓರಲ್ ಎಕ್ಸಾಂ ಮಾಡುತ್ತಿದ್ದಾರೆ.
ವಾಟ್ಸಪ್ ವಿಡಿಯೋ ಕಾಲ್ ಮೂಲಕ ಪೇಜಾವರ ಸ್ವಾಮೀಜಿ ಪ್ರಶ್ನೆ ಕೇಳ್ತಾರೆ. ವಿದ್ಯಾರ್ಥಿಗಳು ಅದಕ್ಕೆ ಉತ್ತರ ಕೊಡುತ್ತಾರೆ. ಕಾವ್ಯ-ವ್ಯಾಕರಣ, ವೇದಾಂತ, ನ್ಯಾಯ ಶಾಸ್ತ್ರ, ಮೀಮಾಂಸದ ಪ್ರಶ್ನೆಗಳನ್ನು ಶ್ರೀಗಳು ಮಧ್ಯ ಮಧ್ಯ ಕೇಳುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪರೀಕ್ಷೆ ಮಾಡಲು ಕನಿಷ್ಟ 2 ಗಂಟೆ ಬೇಕಾಗುತ್ತದೆ. ಬೆಳಗ್ಗೆ 3:30ಕ್ಕೆ ಎದ್ದು, ನಿತ್ಯಕರ್ಮ ಮುಗಿಸುವ ಶ್ರೀಗಳು ಬೆಳಗ್ಗೆ 5ರಿಂದ ಪರೀಕ್ಷೆ ಆರಂಭಿಸುತ್ತಾರೆ. 9 ಗಂಟೆಗೆ ಪೂಜೆ ನೆರವೇರಿಸುತ್ತಾರೆ. ಮಧ್ಯಾಹ್ನ ಮತ್ತೆ ಪರೀಕ್ಷೆ ಆರಂಭಿಸುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.
ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯುತ್ತದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳು, ದೆಹಲಿ, ಚೆನ್ನೈ, ಹೈದರಾಬಾದ್‍ನಲ್ಲಿರುವ ವಿದ್ಯಾರ್ಥಿಗಳು ಆನ್‍ಲೈನ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.