ಹಲೋ… ಟಿ.ಆರ್.ಕೆ. ಭಟ್ ಜೀ ನಮಷ್ಕಾರ್… ಮೈ ನರೇಂದ್ರ ಮೋದಿ…! ; ಕೇರಳದ ಪ್ರಥಮ ಬಿಜೆಪಿ ಪಂಚಾಯತ್ ಅಧ್ಯಕ್ಷರೂ ಆಗಿದ್ದ ಹಿರಿಯ ಆರ್.ಎಸ್.ಎಸ್. ಮುಖಂಡರಿಗೆ ಮೋದಿ ಕರೆ – ಕಹಳೆ ನ್ಯೂಸ್
ಪೆರ್ಲ: ಕೇರಳದ ಪ್ರಥಮ ಬಿಜೆಪಿ ಪಂಚಾಯತ್ ಅಧ್ಯಕ್ಷರೂ ಆಗಿದ್ದ ಹಿರಿಯ ಧಾರ್ಮಿಕ ಮುಖಂಡ, ಸಮಾಜ ಸೇವಕ ಟಿ.ಆರ್.ಕೆ. ಭಟ್ ಅವರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದು ಅವರಿಗೆ ದೂರವಾಣಿ ಕರೆ ಮಾಡಿ ಆಶೀರ್ವಾದ ಕೋರಿದರಲ್ಲದೆ ಆ ಹಿರಿಯರ ಆರೋಗ್ಯ ವಿಚಾರಿಸಿದ ಘಟನೆ ಗುರುವಾರ ನಡೆದಿದೆ.
ಆರು ನಿಮಿಷಗಳ ಕಾಲ ಮಾತುಕತೆ…!
ಬೆಳಿಗ್ಗೆ 9 ಗಂಟೆಗೆ ಕರೆ ಮಾಡಿದ ಪ್ರಧಾನಿ ಮೋದಿಯವರು ಆರು ನಿಮಿಷಗಳ ಕಾಲ ಅವರೊಂದಿಗೆ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಿದರಲ್ಲದೆ, ಸಮಾಜಸೇವೆಯ ಬಗ್ಗೆಯೂ ಮಾತನಾಡಿದರು. ಈ ಸಂದರ್ಭ ಅಚ್ಚರಿ, ಸಂತಸಗೊಂಡ ಟಿ.ಆರ್.ಕೆ.ಭಟ್ ಅವರು ಪ್ರಧಾನಿಯವರ ಅದ್ಭುತ ಕಾರ್ಯಕ್ಷಮತೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಶ್ಲಾಘಿಸಿದರು. ನಿಮ್ಮ ಉತ್ತಮ ಕಾರ್ಯಗಳನ್ನು ಗಮನಿಸುತ್ತಿದ್ದೇನೆ. ಮುಂದೆಯೂ ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಶ್ರಮಿಸುತ್ತಿರುವ ತಮಗೆ ಭಗವಂತ ಆಯುರಾರೋಗ್ಯ, ಶಕ್ತಿಗಳನ್ನು ಕರುಣಿಸಲಿ ಎಂದು ಹಾರೈಸಿದರು. ನಿಮ್ಮಂತಹ ಹಿರಿಯರ ಆಶೀರ್ವಾದದಿಂದ ಇದು ಸಾಕಾರಗೊಳ್ಳಲಿದೆ ಎಂದು ಪ್ರಧಾನಿಯವರು ಪ್ರತಿಕ್ರಿಯಿಸಿದರು.
ಜನಸಂಘ ಮತ್ತು ಬಿಜೆಪಿಯಲ್ಲಿ ಸಕ್ರಿಯ…
ಪೆರ್ಲದಲ್ಲಿ ವಾಸವಾಗಿರುವ ತಡೆಗಲ್ಲು ರಾಮಕೃಷ್ಣ ಭಟ್ ಅವರಿಗೀಗ 90ರ ಹರೆಯ. ಸ್ವಾತಂತ್ರ್ಯ ಸಮರದಲ್ಲೂ ಪಾಲ್ಗೊಂಡಿದ್ದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾರ್ವಜನಿಕ ಬದುಕಿಗೆ ಪ್ರವೇಶಿಸಿ ಅನಂತರ ಜನಸಂಘ ಮತ್ತು ಬಿಜೆಪಿಯಲ್ಲಿ ಸಕ್ರಿಯರಾಗಿ ಟಿ.ಆರ್.ಕೆ.ಭಟ್ ಎಂದೇ ಜನಪ್ರಿಯರು. ತುರ್ತು ಪರಿಸ್ಥಿತಿ ವೇಳೆಯಲ್ಲೂ ಹೋರಾಟ ನಡೆಸಿದ್ದ ಅವರು ಸಂಘದ ವಿರುದ್ಧ ದಮನ ನೀತಿಯ ವೇಳೆ ಸೆರೆವಾಸವನ್ನೂ ಅನುಭವಿಸಿದ್ದರು. ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಅವರು ಉತ್ತರ ಕೇರಳದ ಮಂಜೇಶ್ವರ ಬ್ಲಾಕ್ ಪಂಚಾಯತ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.ಈ ಸಂದರ್ಭ ತಮಗೂ ಪ್ರಧಾನಿಯವರ ಜೊತೆ ಮಾತನಾಡುವ ಅವಕಾಶ ಲಭಿಸಿತೆಂದು ಟಿ.ಆರ್.ಕೆ.ಭಟ್ ಅವರ ಪುತ್ರ ಪ್ರಸಾದ್ ಟಿ.ಪೆರ್ಲ ಅವರು ಸಂತಸದಿಂದ ತಿಳಿಸಿದ್ದಾರೆ.