ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಬ್ಬ ಪೇಪರ್ ಟೈಗರ್, ಪ್ರಧಾನಿ ನರೇಂದ್ರ ಮೋದಿ ಒಬ್ಬ ಹಿಟ್ಲರ್ ಎಂಬ ಮಾತು ನಿಜ ಎಂದು ಸಚಿವ ಕೆ.ಜೆ. ಜಾರ್ಜ್ ಇದೇ ವೇಳೆ ವಾಗ್ದಾಳಿ ನಡೆಸಿದರು.
ನಾವು ಬಹಳಷ್ಟು ಹುಲಿಗಳನ್ನು ನೋಡಿದ್ದೇವೆ. ಶಾ ಒಬ್ಬ ಪೇಪರ್ ಟೈಗರ್ ಅಷ್ಟೆ. ಇನ್ನು ಮೋದಿ ಅವರನ್ನು ಗುಜರಾತ್ ಲಯನ್ ಬರುತ್ತೆ ಅಂತಾರಲ್ಲ ಬಿಜೆಪಿಯವರು ನಮ್ಮ ಬನ್ನೇರುಘಟ್ಟದಲ್ಲೂ ಸಾಕಷ್ಟು ಸಿಂಹಗಳಿವೆ. ಸಿಂಹ ಕಾಡಿನಲ್ಲಿದ್ದರೆ ಮಾತ್ರ ಶಕ್ತಿ. ಝೂನಲ್ಲಿರುವ ಸಿಂಹ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುತ್ತೆ. ಕರ್ನಾಟಕ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಪ್ರಧಾನಿ ಮೋದಿ ಹಿಟ್ಲರ್ ಎಂಬ ಸಚಿವ ರಮೇಶ್ ಕುಮಾರ್ ಹೇಳಿದ ಮಾತು ನಿಜ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿರುವ ‘ಚಾರ್ಜ್‌ಶೀಟ್’ ಒಂದು ದೊಡ್ಡ ಸುಳ್ಳಿನ ಕಂತೆ, ಕಸಕ್ಕೆ ಎಸೆಯಲೂ ಬಾರದಂತಹ ವೇಸ್ಟ್ ಬಂಡಲ್. ಬಿಜೆಪಿಯವರು ತಮ್ಮ ಮೇಲಿರುವ ಆರೋಪಗಳನ್ನೆಲ್ಲಾ ತಾವೇ ಪಟ್ಟಿ ಮಾಡಿಕೊಂಡು ತಮ್ಮ ಮರ್ಯಾದೆಯನ್ನು ಬೀದಿಯಲ್ಲಿ ಹರಾಜುಹಾಕಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನ ಪ್ರತಿಯೊಂದು ಆರೋಪಗಳಿಗೂ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ಏನೇ ಮಾಡಿದರೂ ಮುಂದಿನ ಚುನಾವಣೆಯಲ್ಲಿ 50 ಸೀಟೂ ಗೆಲ್ಲಲು ಸಾಧ್ಯವಿಲ್ಲ. ಸೋಲಿನ ಭಯದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಬಿಡುಗಡೆ ಮಾಡಿರುವ ‘ಚಾರ್ಜ್‌ಶೀಟ್’ನಲ್ಲಿ ಒಂದೇ ಒಂದು ಆರೋಪದ ಬಗ್ಗೆಯಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಜೈಲಿಗೆ ಹೋದವರು: ದಿನೇಶ್ ಗುಂಡೂ ರಾವ್ ಮಾತನಾಡಿ, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಆರೋಪ ಮಾಡಿದ್ದಾರೆ. ಅವರ ಚಾರ್ಜ್‌ಶೀಟ್‌ನಲ್ಲಿರುವ ಬಹುತೇಕ ಆರೋಪಗಳು ಬಿಜೆಪಿಯ ವಿವಿಧ ನಾಯಕರ ಮೇಲೆ ಇವೆ.
ಉದಾಹರಣೆಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅನರ್ಹರಿಗೆ 2 ಸಾವಿರ ಎಕರೆ ಭೂಮಿ ಹಂಚಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಇದರ ತನಿಖೆ ನಡೆಯುತ್ತಿದೆ. ಇನ್ನು ಯಡಿಯೂರಪ್ಪ, ಕೃಷ್ಣಯ್ಯಶೆಟ್ಟಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಮತ್ತವರ ಪುತ್ರ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದ ವರು.ಇಂತಹವರನ್ನು ಪಕ್ಷದಲ್ಲಿಟ್ಟುಕೊಂಡು ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತ ನಾಡುತ್ತಾರೆ ಎಂದು ಟಾಂಗ್ ನೀಡಿದರು.
ತಾವೇ ತೆಗೆದುಕೊಳ್ತಾವ್ರೆ: ಇನ್ನು ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳ ಟಾಪ್ 10 ರಾಜ್ಯಗಳ ಪೈಕಿ ಕರ್ನಾಟಕದ ಹೆಸರಿಲ್ಲ. ವಿವಿಧ ಬಿಜೆಪಿ ಆಡಳಿತದ ರಾಜ್ಯಗಳ ಹೆಸರಿದೆ. ಬಿಜೆಪಿ ನಾಯಕರು ಸುಳ್ಳು ಹೇಳೋದನ್ನು ಈಗಲಾದರೂ ನಿಲ್ಲಿಸಬೇಕು.
ತಮ್ಮ ಅಧಿಕಾರಾವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಂತಹ ಒಂದು ಯೋಜನೆಯನ್ನೂ ಮಾಡಲಾಗದಿದ್ದರೂ ರಾಜ್ಯನ್ನು ಲೂಟಿ ಮಾಡಿ ಹೋದರು. ಈಗ ತಮ್ಮ ಮೇಲಿರುವ ಆರೋಪಗಳನ್ನೆಲ್ಲಾ ಪಟ್ಟಿ ಮಾಡಿ ಬಿಡುಗಡೆ ಮಾಡಿಕೊಂಡು ತಮ್ಮ ತಲೆ ಮೇಲೆ ತಾವೇ ಕಲ್ಲು ಹಾಕೊಳ್ಳುತ್ತಿದ್ದಾರೆ. ತಮ್ಮ ಮರ್ಯಾದೆ ತಾವೇ ಹರಾಜುಹಾಕಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಜನರಿಗೆ ಲೆಕ್ಕ ಕೊಡ್ತೇವೆ: ರಾಜ್ಯ ಸರ್ಕಾರ ಖರ್ಚು ಮಾಡಿರುವ ಪ್ರತಿಯೊಂದು ರು. ಲೆಕ್ಕವನ್ನೂ ರಾಜ್ಯದ ಜನರಿಗೆ ಕೊಡ್ತುತ್ತೇವೆ. ಸರ್ಕಾರದ ಸಾಧನೆಗಳನ್ನು ಪುಸ್ತಕ ಮಾಡಿ ಮನೆ ಮನೆಗೆ ತಲುಪಿಸುತ್ತೇವೆ. ಇದರಲ್ಲಿ ಒಂದೇ ಒಂದು ಅಕ್ರಮ ಪ್ರಕರಣ ಇದ್ದರೂ ಬಿಜೆಪಿಯವರು ದಾಖಲೆ ಬಹಿರಂಗಪಡಿಸಲಿ ಎಂದರು.