Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ; ಮಂಗಳೂರಿನ ಬೋಳೂರು ಸಮೀಪದ ಮಹಿಳೆಗೆ ಕೊರೊನಾ ಸೋಂಕು ದೃಢ – ಕಹಳೆ ನ್ಯೂಸ್
ಮಂಗಳೂರು: ಕರಾವಳಿಯಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮತ್ತೊಬ್ಬರಲ್ಲಿ ದೃಢಪಟ್ಟಿದೆ. ನಗರದ ಬೋಳೂರು ಸಮೀಪದ 58 ವರ್ಷ ವಯಸ್ಸಿನ ಮಹಿಳೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೋಳೂರಿನಲ್ಲಿ ಮತ್ತೊಂದು ಪ್ರಕರಣ ದೃಢವಾಗಿದೆ. ಈ ಮಹಿಳೆ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ. ಸೋಂಕಿತರ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಾಗಿರುವುದು ಖಚಿತವಾಗಿದೆ. ಸದ್ಯ ಈಕೆಗೆ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಏ.19ರಂದು ಮೊದಲ ಕೊರೊನಾ ಸೋಂಕಿತ ಮಹಿಳೆ ( ಬಂಟ್ವಾಳದ ನಿವಾಸಿ ) ಸಾವನ್ನಪ್ಪಿದ್ದರು. ಬಳಿಕ ಮಹಿಳೆಯ ಅತ್ತೆಗೂ ಕೊರೊನಾ ಪಾಸಿಟಿವ್ ಬಂದಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಈ ಎರಡು ಸಾವಿನ ಬಳಿಕ, ಕೊರೊನಾ ಹಾಟ್‍ಸ್ಪಾಟ್ ಆಗಿ ಬದಲಾಗಿರುವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಬಂಟ್ವಾಳದ ಮತ್ತಿಬ್ಬರಿಗೆ (ತಾಯಿ-ಮಗಳು) ಕೊರೊನಾ ದೃಢಪಟ್ಟಿತ್ತು. ಹೀಗೆ ಬಂಟ್ವಾಳ ಕಸಬಾ ಗ್ರಾಮ ಒಂದರಿಂದಲೇ ಇದುವರೆಗೆ ಒಟ್ಟು ನಾಲ್ಕು ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು.
ಇದಾದ ಬಳಿಕ ಮಂಗಳೂರಿನ ಶಕ್ತಿನಗರದ ನಿವಾಸಿಗಳಾದ 80 ವರ್ಷದ ತಾಯಿ ಮತ್ತು ಆಕೆಯ ಆರೈಕೆಗೆ ಬಂದಿದ್ದ 45 ವರ್ಷದ ಮಗನಿಗೆ ಸೋಂಕು ಕಾಣಿಸಿಕೊಂಡಿತ್ತು. ಈಗಾಗಲೇ ಆ ಏರಿಯಾವನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲಾಗಿದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಮಂಗಳೂರಿನಲ್ಲಿ ಮತ್ತೊಂದು ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದೆ.